ಪುಣೆ ಸಂಚಾರ ನಿಲ್ದಾಣದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದ ಯುವಕನಿಂದ ಶಿಂದೆ ಬಳಿ ಕ್ಷಮೆ ಯಾಚನೆ

PC : indiatoday.in
ಮುಂಬೈ: ಪುಣೆ ಸಂಚಾರ ನಿಲ್ದಾಣದಲ್ಲಿ ಮೂತ್ರ ವಿಸರ್ಜನೆ ಮಾಡುವಾಗ ವೀಡಿಯೊ ಚಿತ್ರೀಕರಣಕ್ಕೊಳಗಾಗಿದ್ದ ಗೌರವ್ ಅಹುಜಾ ಎಂಬ ಯುವಕನನ್ನು ಪೊಲೀಸರು ವಶಕ್ಕೆ ಪಡೆಯುವುದಕ್ಕೂ ಮುನ್ನ, ಆತ ವೀಡಿಯೊವೊಂದನ್ನು ಚಿತ್ರೀಕರಿಸಿ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆಯ ಬಳಿ ಕ್ಷಮೆ ಯಾಚಿಸಿದ್ದಾನೆ.
ಇದಕ್ಕೂ ಮುನ್ನ, ಬಿಎಂಡಬ್ಲ್ಯೂ ಕಾರಿನಿಂದ ಹೊರಗಿಳಿದಿದ್ದ ಗೌರವ್ ಅಹುಜಾ, ರಸ್ತೆ ಮಧ್ಯದಲ್ಲೇ ಮೂತ್ರ ವಿಸರ್ಜಿಸುತ್ತಿರುವುದು ಹಾಗೂ ಈ ಸಂದರ್ಭದಲ್ಲಿ ಕಾರಿನ ಬಾಗಿಲುಗಳು ತೆರೆದಿರುವುದು ವೀಡಿಯೊವೊಂದರಲ್ಲಿ ಸೆರೆಯಾಗಿತ್ತು. ಈ ವರ್ತನೆಗಾಗಿ ಕ್ಷಮೆ ಯಾಚಿಸಿರುವ ಆತ, ಇನ್ನು ಮುಂದೆ ಯಾವತ್ತೂ ಇಂತಹ ವರ್ತನೆಯನ್ನು ಪುನರಾವರ್ತಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾನೆ.
ಸಾಮಾಜಿಕ ಮಾಧ್ಯಮದಲ್ಲಿ ತಕ್ಷಣವೇ ವೈರಲ್ ಆಗಿದ್ದ ಈ ವೀಡಿಯೊದಲ್ಲಿ, ಯರವಾಡದಲ್ಲಿನ ಶಾಸ್ತ್ರಿನಗರ ಚೌಕದಲ್ಲಿ ಗೌರವ್ ಅಹುಜಾ ಮೂತ್ರ ವಿಸರ್ಜನೆ ಮಾಡುವಾಗ, ಭಾಗ್ಯೇಶ್ ಓಸ್ವಾಲ್ ಎಂಬ ಮತ್ತೋರ್ವ ವ್ಯಕ್ತಿ ಐಷಾರಾಮಿ ಕಾರಿನ ಮುಂಬದಿಯ ಆಸನದಲ್ಲಿ ಕುಳಿತಿರುವುದು ಸೆರೆಯಾಗಿದೆ. ದಾರಿಹೋಕರು ಈ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲು ಮುಂದಾದಾಗ, ಅವರಿಬ್ಬರೂ ಕ್ಯಾಮೆರಾವನ್ನು ಕಿತ್ತುಕೊಳ್ಳಲು ಯತ್ನಿಸಿರುವುದೂ ವೀಡಿಯೊದಲ್ಲಿ ಸೆರೆಯಾಗಿದೆ.
ಈ ಘಟನೆಯ ವೀಡಿಯೊ ತುಣುಕು ವೈರಲ್ ಆಗುತ್ತಿದ್ದಂತೆಯೆ, ಪುಣೆ ಪೊಲೀಸರು ಈ ಕುರಿತು ವಿಚಾರಣೆ ಕೈಗೆತ್ತಿಕೊಂಡಿದ್ದರು. ಈ ಘಟನೆಯ ಕುರಿತು ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆಯೆ ಎಚ್ಚೆತ್ತುಕೊಂಡಿರುವ ಗೌರವ್ ಅಹುಜಾ, ತನ್ನನ್ನು ಪೊಲೀಸರು ವಶಕ್ಕೆ ಪಡೆಯುವುದಕ್ಕೂ ಮುನ್ನ ಕ್ಷಮಾಯಾಚನೆಯ ವೀಡಿಯೊ ಸಂದೇಶವೊಂದನ್ನು ಚಿತ್ರೀಕರಿಸಿದ್ದಾನೆ. ಆ ವೀಡಿಯೊದಲ್ಲಿ, “ನನ್ನ ನಿನ್ನೆಯ ವರ್ತನೆ ಬಗ್ಗೆ ನನಗೆ ತೀರಾ ನಾಚಿಕೆಯಾಗುತ್ತಿದೆ. ನಾನು ನಿಜವಾಗಿಯೂ ಪುಣೆ, ಮಹಾರಾಷ್ಟ್ರ ಹಾಗೂ ಭಾರತದ ಜನರ ಕ್ಷಮೆ ಕೋರುತ್ತೇನೆ. ನಾನು ಪೊಲೀಸ್ ಇಲಾಖೆ ಹಾಗೂ ಏಕನಾಥ್ ಶಿಂದೆಯವರಿಗೂ ಕ್ಷಮೆ ಕೋರುತ್ತೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ, ನನಗೊಂದು ಅವಕಾಶ ನೀಡಿ. ಅದು ಮತ್ತೆಂದೂ ಮರುಕಳಿಸುವುದಿಲ್ಲ” ಎಂದು ಆತ ಮನವಿ ಮಾಡಿದ್ದಾನೆ. ಅಲ್ಲದೆ, ಇನ್ನು ಎಂಟು ಗಂಟೆಗಳೊಳಗಾಗಿ ಪೊಲೀಸರಿಗೆ ಶರಣಾಗುತ್ತೇನೆ ಎಂದೂ ಹೇಳಿಕೊಂಡಿದ್ದಾನೆ.
ಘಟನೆಯ ನಂತರ, ಮಾರ್ಚ್ 8ರಂದು ಆತ ಪುಣೆಯಿಂದ ಕೊಲ್ಲಾಪುರಕ್ಕೆ ತೆರಳಿದ್ದಾನೆ. ಕೊಲ್ಲಾಪುರ ನಗರವನ್ನು ಪ್ರವೇಶಿಸುವುದಕ್ಕೂ ಮುನ್ನ ಆತ ತನ್ನ ಬಿಎಂಡಬ್ಲ್ಯೂ ಕಾರನ್ನು ನಿಲ್ಲಿಸಿದ್ದು, ಮತ್ತೊಂದು ವಾಹನವನ್ನು ಬಾಡಿಗೆ ಪಡೆದು, ಧಾರವಾಡಕ್ಕೆ ಪ್ರಯಾಣಿಸಲು ಆಟೊ ರಿಕ್ಷಾ ಚಾಲಕನೊಬ್ಬನ ನೆರವು ಪಡೆದಿದ್ದಾನೆ.
ಆದರೆ, ಸಂಕೇಶ್ವರಕ್ಕೆ ತಲುಪುತ್ತಿದ್ದಂತೆ ದಿಢೀರೆಂದು ತನ್ನ ಪ್ರಯಾಣದ ಸ್ಥಳವನ್ನು ಬದಲಿಸಿರುವ ಗೌರವ್ ಅಹುಜಾ, ತನ್ನನ್ನು ಮರಳಿ ಪುಣೆಗೆ ಕರೆದೊಯ್ಯುವಂತೆ ಚಾಲಕನಿಗೆ ಸೂಚಿಸಿದ್ದಾನೆ. ಯರವಾಡಕ್ಕೆ ಮರಳಿದ ನಂತರ, ತನ್ನ ಕ್ಷಮಾಯಾಚನೆ ವೀಡಿಯೊವನ್ನು ಚಿತ್ರೀಕರಿಸುವಂತೆ ಚಾಲಕನಿಗೆ ಮನವಿ ಮಾಡಿರುವ ಆತ, ಪೊಲೀಸರು ತನ್ನನ್ನು ವಶಕ್ಕೆ ಪಡೆಯುವುದಕ್ಕೂ ಮುನ್ನ, ಆ ವೀಡಿಯೊವನ್ನು ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾನೆ.
ಇದರ ಬೆನ್ನಿಗೇ, ಪೊಲೀಸರು ಗೌರವ್ ಅಹುಜಾನನ್ನು ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿ ಪತ್ತೆ ಹಚ್ಚಿ, ಆತನನ್ನು ವಶಕ್ಕೆ ಪಡೆದಿದ್ದಾರೆ. ನಂತರ, ಕಾನೂನು ಪ್ರಕ್ರಿಯೆಗಳಿಗಾಗಿ ಆತನನ್ನು ಯರವಾಡ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ.
ಗೌರವ್ ಅಹುಜಾನ ಸಹಚರ ಭಾಗ್ಯೇಶ್ ಓಸ್ವಾಲ್ ನನ್ನೂ ವಶಕ್ಕೆ ಪಡೆದಿರುವ ಪೊಲೀಸರು, ಘಟನೆ ನಡೆದ ಸಂದರ್ಭದಲ್ಲಿ ಅವರಿಬ್ಬರೂ ಮದ್ಯಪಾನ ಮಾಡಿರಬಹುದು ಎಂದು ಶಂಕಿಸಿದ್ದಾರೆ. ಘಟನೆಯ ವೇಳೆ ಭಾಗ್ಯೇಶ್ ಓಸ್ವಾಲ್ ಏನಾದರೂ ಮದ್ಯ ಅಥವಾ ಮಾದಕ ದ್ರವ್ಯಗಳ ಅಮಲಿಗೆ ಒಳಗಾಗಿದ್ದನೆ ಎಂಬುದನ್ನು ಪತ್ತೆ ಹಚ್ಚಲು, ಪೊಲೀಸರು ಆತನನ್ನು ವೈದ್ಯಕೀಯ ಪರೀಕ್ಷೆಗೆ ರವಾನಿಸಿದ್ದಾರೆ.
ಸಾರ್ವಜನಿಕ ದುರ್ನಡತೆ, ಅಜಾಗರೂಕ ಚಾಲನೆ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಧಕ್ಕೆ ತಂದ ಆರೋಪಗಳ ಮೇಲೆ ಭಾರತೀಯ ನ್ಯಾಯ ಸಂಹಿತೆ ಹಾಗೂ ಮೋಟಾರು ವಾಹನಗಳ ಕಾಯ್ದೆಯ ವಿವಿಧ ಸೆಕ್ಷನ್ ಗಳಡಿ ಗೌರವ್ ಅಹುಜಾ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.







