ಸೌಮ್ಯಾ ವಿಶ್ವನಾಥನ್ ಹತ್ಯೆ ಪ್ರಕರಣ ; ನಾಲ್ವರು ದೋಷಿಗಳಿಗೆ ಜೀವಾವಧಿ ಶಿಕ್ಷೆ

ಸೌಮ್ಯಾ ವಿಶ್ವನಾಥನ್ (Photo: NDTV)
ಹೊಸದಿಲ್ಲಿ: ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಹತ್ಯೆ ಪ್ರಕರಣದಲ್ಲಿ ದಿಲ್ಲಿ ನ್ಯಾಯಾಲಯ ಶನಿವಾರ ನಾಲ್ವರು ದೋಷಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಐದನೇ ದೋಷಿಗೆ 3 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ. ದಿಲ್ಲಿಯಲ್ಲಿ ಅಪರಾಧ ನಡೆದ 15 ವರ್ಷಗಳ ಬಳಿಕ ಈ ತೀರ್ಪು ಘೋಷಣೆಯಾಗಿದೆ.
ನಾಲ್ವರು ಆರೋಪಿಗಳಾದ ಅಮಿತ್ ಶುಕ್ಲಾ, ಬಲ್ಜೀತ್ ಮಲಿಕ್, ರವಿ ಕಪೂರ್ ಹಾಗೂ ಅಜಯ್ ಕುಮಾರ್ ಅವರಿಗೆ ತಲಾ 25 ಸಾವಿರ ರೂ. ದಂಡ, ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಎಂಸಿಒಸಿಎ)ಅಡಿಯಲ್ಲಿ ತಲಾ 1 ಲಕ್ಷ ರೂ. ದಂಡ ಕೂಡ ವಿಧಿಸಲಾಗಿದೆ. ಐದನೇ ದೋಷಿ ಅಜಯ್ ಸೇಥಿಗೆ 7.5 ಲಕ್ಷ ರೂ. ದಂಡ ವಿಧಿಸಲಾಗಿದೆ.
ಶಿಕ್ಷೆಯ ಪ್ರಮಾಣ ಘೋಷಿಸಿದ ನ್ಯಾಯಾಲಯ, ನಾಲ್ವರ ದೋಷಿಗಳ ಕೃತ್ಯ ಅಪರೂಪದಲ್ಲಿ ಅಪರೂಪದ ಪ್ರಕರಣಗಳ ಅಡಿಯಲ್ಲಿ ಬರುವುದಿಲ್ಲ. ಆದುದರಿಂದ ಅವರಿಗೆ ಮರಣ ದಂಡನೆ ನೀಡುವ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ಹೇಳಿದೆ.
ಇಂಡಿಯಾ ಟುಡೆ ಸಮೂಹದ ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಅವರು 2008 ಸೆಪ್ಟಂಬರ್ 30ರಂದು ಬೆಳಗ್ಗೆ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಗುಂಡು ಹಾರಿಸಿ ಹತ್ಯೆಗೈಯಲಾಗಿತ್ತು. ಈ ಹತ್ಯೆಯ ಹಿಂದಿನ ಉದ್ದೇಶ ದರೋಡೆ ಎಂದು ಪೊಲೀಸರು ಪ್ರತಿಪಾದಿಸಿದ್ದರು.
ಅಕ್ಟೋಬರ್ 18ರಂದು ನ್ಯಾಯಾಲಯ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ಹಾಗೂ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಸೆಕ್ಷನ್ ಅಡಿಯಲ್ಲಿ ರವಿ ಕಪೂರ್, ಅಮಿತ್ ಶುಕ್ಲಾ, ಬಲ್ಜೀತ್ ಮಲಿಕ್ ಹಾಗೂ ಅಜಯ್ ಕುಮಾರ್ ಅವರನ್ನು ದೋಷಿಗಳು ಎಂದು ಹೇಳಿತ್ತು. ಅಜಯ್ ಸೇಥಿಯನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 411 ಹಾಗೂ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಸೆಕ್ಷನ್ ಅಡಿಯಲ್ಲಿ ದೋಷಿ ಎಂದು ಪರಿಗಣಿಸಿತ್ತು.
ಆರೋಪಿಗಳನ್ನು 2009 ಮಾರ್ಚ್ನಲ್ಲಿ ಬಂಧಿಸಲಾಗಿತ್ತು. ಆದರೆ, ಪ್ರಕರಣದಲ್ಲಿ ಎಲ್ಲಾ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯದ ಮುಂದಿಡಲು ಪ್ರಾಸಿಕ್ಯೂಷನ್ ಗೆ 13 ವರ್ಷ ಕಾಲ ಬೇಕಾಯಿತು. ಪ್ರಕರಣದ ವಿಚಾರಣೆ 2010 ಫೆಬ್ರವರಿಯಲ್ಲಿ ಆರಂಭವಾಗಿತ್ತು.







