ಎಸ್ಪಿ ಸಂಸದೆ ಇಕ್ರಾ ಹಸನ್ ಡೀಪ್ಫೇಕ್ ವೈರಲ್; ಹರಿಯಾಣದ ಇಬ್ಬರು ಅಪ್ರಾಪ್ತರಿಂದ ಕೃತ್ಯ

ಇಕ್ರಾ ಹಸನ್ | Courtesy: X/ @ViralWizardX
ಹೊಸದಿಲ್ಲಿ: ಸಮಾಜವಾದಿ ಪಕ್ಷದ ಯುವ ಸಂಸದೆ ಮತ್ತು ಶಾಮ್ಲಿಯ ಕೈರಾನಾ ಲೋಕಸಭಾ ಕ್ಷೇತ್ರದ ಪ್ರತಿನಿಧಿ ಇಕ್ರಾ ಹಸನ್ ಚಿತ್ರವನ್ನು AI ತಂತ್ರಜ್ಞಾನ ಬಳಸಿಕೊಂಡು ಅಸಭ್ಯ ವೀಡಿಯೋವನ್ನು ತಯಾರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ.
ಈ ಘಟನೆಯು ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆ ಸಂಬಂಧಿತ ತನಿಖೆಯಲ್ಲಿ ಹರಿಯಾಣದ ನೂಹ್ ಜಿಲ್ಲೆಗೆ ಸೇರಿದ ಇಬ್ಬರು ಅಪ್ರಾಪ್ತರನ್ನು ಪೊಲೀಸರು ಆರೋಪಿಗಳು ಎಂದು ಗುರುತಿಸಿದ್ದಾರೆ.
ಆರೋಪಿತ ಬಾಲಕರು ‘ಇಕ್ರಾ ಹಸನ್ ಚೌಧರಿ ಎಂಪಿ’ ಹೆಸರಿನಲ್ಲಿ ಫೇಸ್ಬುಕ್ ನಲ್ಲಿ ನಕಲಿ ಖಾತೆ ತೆರೆದಿದ್ದರು. ಈ ಖಾತೆಯ ಮೂಲಕ ಡೀಪ್ಫೇಕ್ ವೀಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಂತೆ ಸಂಸದೆಯ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಕ್ರಮಕ್ಕೆ ಆಗ್ರಹಿಸಿದ್ದರು ಎನ್ನಲಾಗಿದೆ.
ಸಂಸದೆಯ ಬೆಂಬಲಿಗ ಇಮ್ರಾನ್ ನದ್ವಿ ಅವರು ವೀಡಿಯೋ ಸ್ಕ್ರೀನ್ಶಾಟ್ಗಳನ್ನು ಸಾಮಾಜಿಕ ಮಾಧ್ಯಮ xನ ಖಾತೆಯಲ್ಲಿ ಪೋಸ್ಟ್ ಮಾಡಿ, ಉತ್ತರ ಪ್ರದೇಶ ಪೊಲೀಸರ ಗಮನಕ್ಕೆ ತಂದರು. ಈ ಕುರಿತು ರಾಜ್ಯದ ಪೊಲೀಸ್ ಮಹಾನಿರ್ದೇಶಕರು (DGP) ತನಿಖೆಗೆ ಆದೇಶಿಸಿದರು.
ಶಾಮ್ಲಿ ಪೊಲೀಸರು ಸೈಬರ್ ಸೆಲ್ ಗೆ ಪ್ರಕರಣವನ್ನು ವರ್ಗಾಯಿಸಿ ತನಿಖೆಯನ್ನು ನಡೆಸಿತು. ತಮ್ಮ ನಿಕಟ ಪರಿಚಯಸ್ಥ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ರಝಿಯಾ ಬಾನೋ ಅವರನ್ನು ಸಂಪರ್ಕಿಸಿ, ಸಂಸದೆ ಸ್ವತಃ ನುಹ್ನಲ್ಲಿ ವೈಯಕ್ತಿಕ ವಿಚಾರಣೆ ಮಾಡಿದ್ದಾರೆ ಎನ್ನಲಾಗಿದೆ. ಆರೋಪಿಗಳನ್ನು ಹರಿಯಾಣದ ಫಿರೋಜ್ ಪುರ ಅಮ್ಕಾ ಗ್ರಾಮದ ಕಾನೂನೊಂದಿಗೆ ಸಂಘರ್ಷಕ್ಕೊಳಗಾದ ಅಪ್ರಾಪ್ತ ಬಾಲಕರು ಎಂದು ಗುರುತಿಸಲಾಗಿದೆ ಎಂದು Dainik Bhaskar ವರದಿ ಮಾಡಿದೆ.
ಘಟನೆ ಬಹಿರಂಗವಾದ ಬಳಿಕ ಗ್ರಾಮ ಪಂಚಾಯತ್ ಸಭೆ ನಡೆಯಿತು. ಸಭೆಯಲ್ಲಿ ಇಬ್ಬರು ಬಾಲಕರು ತಮ್ಮ ತಪ್ಪನ್ನು ಒಪ್ಪಿಕೊಂಡು, "ಹೆಚ್ಚು ಫಾಲೋವರ್ಸ್ ಗಳಿಸಲು ಈ ವಿಡಿಯೋವನ್ನು ತಯಾರಿಸಿದ್ದೇವೆ" ಎಂದು ತಿಳಿಸಿದ್ದಾರೆ. ಸಭೆಯಲ್ಲಿ ಬಾಲಕರು ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾರೆ. ರಝಿಯಾ ಬಾನೋ ಅವರು ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಬಾಲಕರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಹೇಳಲಾಗಿದೆ.ಆದರೆ ಸಂಸದೆ ಇಕ್ರಾ ಹಸನ್ ಅವರು ಈ ಕ್ಷಮೆ ಸಾಕಾಗದು ಎಂದು ಸ್ಪಷ್ಟಪಡಿಸಿ, ಕಾನೂನು ಪ್ರಕ್ರಿಯೆ ಮುಂದುವರಿಯುವುದು ಎಂದು ತಿಳಿಸಿದ್ದಾರೆ.