ಟೇಲ್ಪೈಪ್ನಲ್ಲಿ ಬೆಂಕಿ: ಕಠ್ಮಂಡುಗೆ ತೆರಳಬೇಕಿದ್ದ ಸ್ಪೈಸ್ಜೆಟ್ ವಿಮಾನ ಹಾರಾಟ ರದ್ದು

ಸ್ಪೈಸ್ಜೆಟ್ ವಿಮಾನ | PC : X
ಹೊಸದಿಲ್ಲಿ, ಸೆ. 11: ಗುರುವಾರ ದಿಲ್ಲಿ ವಿಮಾನ ನಿಲ್ದಾಣದಿಂದ ನೇಪಾಳ ರಾಜಧಾನಿ ಕಠ್ಮಂಡುಗೆ ಹೊರಡುತ್ತಿದ್ದ ಸ್ಪೈಸ್ಜೆಟ್ ವಿಮಾನವೊಂದರ ಹಿಂಭಾಗದ ಟೇಲ್ಪೈಪ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವಿಮಾನದ ಹಾರಾಟವನ್ನು ರದ್ದುಪಡಿಸಲಾಗಿದೆ. ಟೇಲ್ಪೈಪ್ನಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಇನ್ನೊಂದು ವಿಮಾನದ ಸಿಬ್ಬಂದಿ ಗಮನಿಸಿದರು ಎನ್ನಲಾಗಿದೆ.
ಬಳಿಕ ನಡೆದ ತಪಾಸಣೆಯ ವೇಳೆ ಯಾವುದೇ ಅಸಹಜತೆಗಳು ಪತ್ತೆಯಾಗಿಲ್ಲ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
‘‘ಸೆಪ್ಟಂಬರ್ 11ರಂದು, ದಿಲ್ಲಿ ವಿಮಾನ ನಿಲ್ದಾಣದಿಂದ ಕಠ್ಮಂಡುಗೆ ಹೊರಡಲು ನಿಗದಿಯಾಗಿದ್ದ ಸ್ಪೈಸ್ಜೆಟ್ ವಿಮಾನದ ಟೇಲ್ಪೈಪ್ನಲ್ಲಿ ಬೆಂಕಿ ಕಾಣಿಸಿಕೊಂಡಂತೆ ಅನಿಸಿತು ಎಂಬುದಾಗಿ ವಿಮಾನ ನಿಲ್ದಾಣದಲ್ಲಿದ್ದ ಇನ್ನೊಂದು ವಿಮಾನದ ಸಿಬ್ಬಂದಿ ವರದಿ ಮಾಡಿದರು. ಬಳಿಕ ಅದು ಹಾರಾಟವನ್ನು ರದ್ದುಪಡಿಸಿ ತನ್ನ ನೆಲೆಗೆ ಮರಳಿತು. ಈ ದೋಷದ ಬಗ್ಗೆ ಯಾವುದೇ ಎಚ್ಚರಿಕೆ ಅಥವಾ ಸೂಚನೆಗಳು ಕಾಕ್ಪಿಟನ್ನಲ್ಲಿ ಕಂಡುಬಂದಿಲ್ಲ. ಆದರೆ, ಮುನ್ನೆಚ್ಚರಿಕಾ ಕ್ರಮವಾಗಿ ಹಾರಾಟವನ್ನು ರದ್ದುಪಡಿಸಲು ಪೈಲಟ್ಗಳು ನಿರ್ಧರಿಸಿದರು’’ ಎಂದು ಹೇಳಿಕೆಯೊಂದರಲ್ಲಿ ಸ್ಪೈಸ್ಜೆಟ್ ತಿಳಿಸಿದೆ.





