ಶ್ರೀನಗರ | ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷರಿಂದ ಗೃಹಬಂಧನದ ಆರೋಪ

ಮಿರ್ವೈಝ್ ಉಮರ್ ಫಾರೂಕ್ | PTI
ಶ್ರೀನಗರ,ಸೆ.12: ನನ್ನನ್ನು ಗೃಹಬಂಧನದಲ್ಲಿ ಇರಿಸಲಾಗಿದ್ದು, ಜಾಮಿಯಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ನನಗೆ ಅವಕಾಶ ನೀಡಿಲ್ಲ ಎಂದು ಶುಕ್ರವಾರ ಆರೋಪಿಸಿದ ಹುರಿಯತ್ ಕಾನ್ಫರೆನ್ಸ್ ಮಿರ್ವೈಝ್ ಉಮರ್ ಫಾರೂಕ್ ಅವರು, ಇದು ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪವಾಗಿದೆ ಎಂದು ಕಿಡಿಕಾರಿದ್ದಾರೆ.
‘ಜಾಮಿಯಾ ಮಸೀದಿಯಲ್ಲಿ ಮಜ್ಲಿಸೆ ರಹ್ಮತುಲ್ಲಿಲ್ ಆಲಮೀನ್ ಕಾರ್ಯಕ್ರಮದ ಸಂದರ್ಭದಲ್ಲಿ ಅಧಿಕಾರಿಗಳು ನನ್ನನ್ನು ಮತ್ತೆ ಗೃಹಬಂಧನದಲ್ಲಿ ಇರಿಸಿದ್ದಾರೆ’ ಎಂದು ಎಕ್ಸ್ ಪೋಸ್ಟ್ನಲ್ಲಿ ಹೇಳಿರುವ ಕಾಶ್ಮೀರದ ಮುಖ್ಯ ಧರ್ಮಗುರುಗಳೂ ಆಗಿರುವ ಮಿರ್ವೈಝ್,‘ ನಮ್ಮ ಮಾನವ ಮತ್ತು ರಾಜಕೀಯ ಹಕ್ಕುಗಳನ್ನು ಈಗಾಗಲೇ ನಿರಾಕರಿಸಲಾಗಿದೆ. ಈಗ ಅಧಿಕಾರಿಗಳು ನಮ್ಮ ಧಾರ್ಮಿಕ ವಿಷಯಗಳಲ್ಲಿ ನಿರಂತರ ಹಸ್ತಕ್ಷೇಪ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
ಆದರೂ, ಜಾಮಿಯಾ ಮಸೀದಿಯ ಪ್ರವಚನ ಪೀಠವು ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಅಥವಾ ಜನರ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಮತ್ತು ಅವರ ಅಧಿಕಾರಹರಣ ಕುರಿತು ಧ್ವನಿಯೆತ್ತುವುದನ್ನು ಮುಂದುವರಿಸಲಿದೆ ಎಂದು ಮಿರ್ವೈಝ್ ಹೇಳಿದ್ದಾರೆ.





