ಶ್ರೀನಗರ | ಕಾನ್ಸ್ಟೇಬಲ್ಗೆ ಕಸ್ಟಡಿ ಹಿಂಸೆ : 8 ಪೊಲೀಸ್ ಸಿಬ್ಬಂದಿಯ ಜಾಮೀನು ಅರ್ಜಿ ವಜಾ

ಸಾಂದರ್ಭಿಕ ಚಿತ್ರ
ಶ್ರೀನಗರ,ಅ.5: ಎರಡು ವರ್ಷಗಳ ಹಿಂದೆ ಪೊಲೀಸ್ ಕಾನ್ಸ್ಟೇಬಲ್ ಒಬ್ಬರಿಗೆ ಕಸ್ಟಡಿಯಲ್ಲಿ ಹಿಂಸೆ ನೀಡಿದ ಆರೋಪದಲ್ಲಿ ಸಿಬಿಐ ಬಂಧಿಸಿರುವ ಎಂಟು ಪೊಲೀಸ್ ಸಿಬ್ಬಂದಿಯ ಜಾಮೀನು ಅರ್ಜಿಗಳನ್ನು ಶ್ರೀನಗರದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಶನಿವಾರ ತಿರಸ್ಕರಿಸಿದ್ದಾರೆ.
ಉಪ ಪೊಲೀಸ್ ಸೂಪರಿಂಟೆಂಡೆಂಟ್ ಐಜಾಝ್ ಅಹ್ಮದ್ ನಾಯಕ್, ಇನ್ಸ್ಪೆಕ್ಟರ್ ರಿಯಾಝ್ ಅಹ್ಮದ್ ಮಿರ್ ಮತ್ತು ಇತರ ಪೊಲೀಸ್ ಸಿಬ್ಬಂದಿಗಳಾದ ತನ್ವೀರ್ ಅಹ್ಮದ್ ಮಲ್ಲ, ಅಲ್ತಾಫ್ ಹುಸೈನ್ ಭಟ್, ಮುಹಮ್ಮದ್ ಯೂನಿಸ್ ಖಾನ್, ಶಕೀರ್ ಹುಸೈನ್ ಖೋಜಾ, ಶಹ್ನಾವಾಝ್ ಅಹ್ಮದ್ ದೀದಾಡ್ ಮತ್ತು ಜೆಹಂಗೀರ್ ಅಹ್ಮದ್ ಬೇ- ಎಲ್ಲರೂ ನ್ಯಾಯಾಲಯದಲ್ಲಿ ಪ್ರತ್ಯೇಕ ಜಾಮೀನು ಅರ್ಜಿಗಳನ್ನು ಸಲ್ಲಿಸಿದ್ದರು.
2023 ಫೆಬ್ರವರಿಯಲ್ಲಿ ಕುಪ್ವಾರದ ಜಂಟಿ ತನಿಖಾ ಕೇಂದ್ರದಲ್ಲಿ ಕಾನ್ಸ್ಟೇಬಲ್ ಖುರ್ಷೀದ್ ಅಹ್ಮದ್ ಚೌಹಾಣ್ರನ್ನು ಅಕ್ರಮ ಬಂಧನದಲ್ಲಿರಿಸಲಾಗಿತ್ತು ಹಾಗೂ ಆ ಸಂದರ್ಭದಲ್ಲಿ ಆರೋಪಿ ಪೊಲೀಸರು ಚೌಹಾಣ್ರಿಗೆ ತೀವ್ರ ಹಿಂಸೆ ನೀಡಿ ಗಾಯಗೊಳಿಸಿದ್ದರು ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಸಿಬಿಐಗೆ ಸೂಚನೆ ನೀಡಿತ್ತು. ಸುಪ್ರೀಂ ಕೋರ್ಟ್ ಆದೇಶದಂತೆ ಸಿಬಿಐ ಆರೋಪಿ ಪೊಲೀಸರನ್ನು ಬಂಧಿಸಿತ್ತು.
ಆರೋಪಿಗಳು ಜಾಮೀನು ಕೋರಿ ಅರ್ಜಿಗಳನ್ನು ಸಲ್ಲಿಸಿದ್ದರು. ಶ್ರೀನಗರದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಆದಿಲ್ ಮುಶ್ತಾಕ್ ಅಹ್ಮದ್ ಶನಿವಾರ ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ್ದಾರೆ.







