ಅರ್ಹ ಅಂಗವಿಕಲ ಅಭ್ಯರ್ಥಿಗಳಿಗೆ ಬರವಣಿಗೆ ಸಹಾಯಕರನ್ನು ಒದಗಿಸಲು ಎಸ್ಎಸ್ಸಿ ನಿರ್ಧಾರ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಸೆ.4: ಸಿಬ್ಬಂದಿ ಆಯ್ಕೆ ಆಯೋಗ(ಎಸ್ಎಸ್ಸಿ)ವು ತಾನು ನಡೆಸುವ ವಿವಿಧ ನೇಮಕಾತಿ ಪರೀಕ್ಷೆಗಳಿಗೆ ಹಾಜರಾಗುವ ಅರ್ಹ ಅಂಗವಿಕಲ ಅಭ್ಯರ್ಥಿಗಳಿಗೆ ಬರವಣಿಗೆ ಸಹಾಯಕರನ್ನು ಒದಗಿಸಲಿದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಧೀನದ ಅಂಗವಿಕಲ ವ್ಯಕ್ತಿಗಳ ಸಬಲೀಕರಣ ಇಲಾಖೆಯು 2025, ಆ.1ರಂದು ಹೊರಡಿಸಿದ ಸಮಗ್ರ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಮಾರ್ಗಸೂಚಿಯಲ್ಲಿನ ನಿಬಂಧನೆಗಳನ್ನು ಜಾರಿಗೊಳಿಸಲು ಮತ್ತು ಅಭ್ಯರ್ಥಿಗಳು ಸ್ವಂತ ಬರವಣಿಗೆ ಸಹಾಯಕರನ್ನು ಹೊಂದಿರಲು ಅವಕಾಶವನ್ನು ತೆಗೆದುಹಾಕಲು ಎಸ್ಎಸ್ಸಿ ನಿರ್ಧರಿಸಿದೆ.
ಎಸ್ಎಸ್ಸಿ ಪರೀಕ್ಷೆಗಳಿಗೆ ಬರಹ ಸಹಾಯಕರ ಸೇವೆಗಳನ್ನು ಪಡೆದುಕೊಳ್ಳಲು ಅರ್ಹ ಮಾನದಂಡ ಅಂಗವೈಕಲ್ಯದ ವ್ಯಕ್ತಿಗಳಿಗೆ (ಪಿಡಬ್ಲ್ಯುಬಿಡಿ) ಬರಹ ಸಹಾಯಕರನ್ನು ಆಯೋಗವೇ ಒದಗಿಸಲಿದೆ ಎಂದು ಬುಧವಾರ ಹೊರಡಿಸಿರುವ ನೋಟಿಸ್ ನಲ್ಲಿ ಸ್ಪಷ್ಟಪಡಿಸಲಾಗಿದೆ.
ಈ ನಿಬಂಧನೆಯು ನೋಟಿಸ್ ದಿನಾಂಕದ ಬಳಿಕ ನಡೆಯಲಿರುವ ಮತ್ತು ಅರ್ಜಿ ಸಲ್ಲಿಕೆ ಅವಧಿ ಮುಗಿದಿರುವ ಎಲ್ಲ ಪರೀಕ್ಷೆಗಳಿಗೂ ಅನ್ವಯಿಸಲಿದೆ ಎಂದು ಎಸ್ಎಸ್ಸಿ ತಿಳಿಸಿದೆ.





