ನಿಶ್ಚಲ ಉದ್ಯೋಗ ದರ ವಿದ್ಯಾವಂತರಿಗೆ ಕೆಟ್ಟದ್ದು: ಐಐಎಂ ಅಧ್ಯಯನ

Photo : thewire
ಹೊಸದಿಲ್ಲಿ: ಐಐಎಂ ಲಕ್ನೋದ ಸಂಶೋಧಕರು ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಸೈನ್ಸ್ (ಬಿಟ್ಸ್) ಪಿಲಾನಿ ಹಾಗೂ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಸಹಭಾಗಿತ್ವದಲ್ಲಿ ನಡೆಸಿದ ಅಧ್ಯಯನವು ಉದ್ಯೋಗ ಬೆಳವಣಿಗೆ ದರ ನಿಶ್ಚಲಗೊಳ್ಳುತ್ತಿರುವುದನ್ನು, ಉದ್ಯೋಗ ಸ್ಥಿತಿಸ್ಥಾಪಕತ್ವ ದುರ್ಬಲಗೊಳ್ಳುತ್ತಿರುವುದನ್ನು ಮತ್ತು ರಚನಾತ್ಮಕ ಪರಿವರ್ತನೆಯು ನಿಧಾನಗೊಳ್ಳುತ್ತಿರುವುದನ್ನು ಬಹಿರಂಗಗೊಳಿಸಿದೆ. ನಿಶ್ಚಲ ಉದ್ಯೋಗ ದರವು ಉನ್ನತ ವಿದ್ಯಾವಂತರ ಪಾಲಿಗೆ ಒಳ್ಳೆಯದಲ್ಲ ಎಂದು ಅದು ಹೇಳಿದೆ. ಅಧ್ಯಯನ ವರದಿಯು ಇಂಡಿಯನ್ ಜರ್ನಲ್ ಆಫ್ ಲೇಬರ್ ಇಕನಾಮಿಕ್ಸ್ನಲ್ಲಿ ಪ್ರಕಟಗೊಂಡಿದೆ.
ಉದ್ಯೋಗರಹಿತ ಬೆಳವಣಿಗೆ:
ಸಂಶೋಧಕರು ತಮ್ಮ ಅಧ್ಯಯನಕ್ಕೆ ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿಯ ಉದ್ಯೋಗ ಮತ್ತು ನಿರುದ್ಯೋಗ ಸಮೀಕ್ಷೆ ಹಾಗು ಆವರ್ತಕ ಕಾರ್ಮಿಕ ಬಲ ಸಮೀಕ್ಷೆಯ ದತ್ತಾಂಶಗಳನ್ನು ಬಳಸಿಕೊಂಡಿದ್ದಾರೆ.
ಸ್ಪಷ್ಟವಾಗಿ,ಆರ್ಥಿಕ ಬೆಳವಣಿಗೆಯು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಬದಲು ನಿವ್ವಳ ಕಾರ್ಮಿಕ ಸ್ಥಳಾಂತರಕ್ಕೆ ಕಾರಣವಾಗಿದೆ. ಸೃಷ್ಟಿಸಲಾದ ಉದ್ಯೋಗಗಳ ಸಂಖ್ಯೆಯ ಜೊತೆಗೆ ಉದ್ಯೋಗಗಳ ಗುಣಮಟ್ಟವನ್ನು ಪರಿಶೀಲಿಸುವುದೂ ಅಷ್ಟೇ ಮುಖ್ಯವಾಗಿದೆ ಎಂದು ಐಐಎಂ ಲಕ್ನೋದ ಪ್ರೊ.ಎಸ್.ತ್ರಿಪತಿ ರಾವ್ ಅವರು ಅಭಿಪ್ರಾಯಿಸಿದ್ದಾರೆ. 2020-21ರಲ್ಲಿ ಭಾರತದಲ್ಲಿ ಒಟ್ಟು ಕಾರ್ಮಿಕ ಬಲ 55.61 ಕೋ.ಆಗಿತ್ತು. ಈ ಪೈಕಿ ಶೇ.54.9 ಸ್ವೋದ್ಯೋಗಿಗಳಾಗಿದ್ದು, ಕೇವಲ ಶೇ.22.8 ನಿಯಮಿತ ಉದ್ಯೋಗಿಗಳಾಗಿದ್ದರು ಮತ್ತು ಶೇ.22.3 ಸಾಂದರ್ಭಿಕ ಉದ್ಯೋಗಿಗಳಾಗಿದ್ದರು.
ಲಿಂಗ ಅಸಮಾನತೆ ಹದಗೆಡುತ್ತಿದೆ?
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕಾರ್ಮಿಕ ಪಡೆ ಪಾಲ್ಗೊಳ್ಳುವಿಕೆ ದರ (ಎಲ್ಎಫ್ಪಿಆರ್) ದಲ್ಲಿ ಲಿಂಗ ಆಧಾರಿತ ಅಸಮಾನತೆಯು ಮುಂದುವರಿದಿದೆ ಮತ್ತು ಕಳವಳಕಾರಿಯಾಗಿ 1983ರಿಂದ 2020-21ರ ನಡುವಿನ ಅವಧಿಯಲ್ಲಿ ಎಲ್ಎಫ್ಪಿಆರ್ ಕುಸಿತವು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿದೆ ಎನ್ನುವುದನ್ನು ಅಧ್ಯಯನವು ಬಹಿರಂಗಗೊಳಿಸಿದೆ.
ಉನ್ನತ ವಿದ್ಯಾವಂತರಲ್ಲಿ ನಿರುದ್ಯೋಗ ಹೆಚ್ಚು
ತೈವಾನ್ ಮತ್ತು ಇಸ್ರೇಲ್ಂತಹ ದೇಶಗಳಿಗೆ ಅರೆಕುಶಲ ಮತ್ತು ಕೌಶಲ್ಯರಹಿತ ಕಾರ್ಮಿಕರನ್ನು ಒದಗಿಸಲು ಈ ದೇಶಗಳೊಂದಿಗೆ ಮಧ್ಯಸ್ಥಿಕೆಗೆ ಭಾರತ ಸರಕಾರವು ನೆರವಾಗುತ್ತಿದೆ,ಇದು ದೇಶದಲ್ಲಿಯ ಮೂಲಭೂತ ಉತ್ಪಾದನಾ ಕೈಗಾರಿಕೆಗಳಲ್ಲಿ ಉದ್ಯೋಗಗಳನ್ನು ಒದಗಿಸುವಲ್ಲಿ ಅದರ ಅಸಮರ್ಥತೆಯನ್ನು ಸೂಚಿಸುತ್ತಿದೆ. ಈ ನಿಟ್ಟಿನಲ್ಲಿ ತೈವಾನ್ ಜೊತೆ ಒಡಂಬಡಿಕೆಗೆ 2024,ಫೆ.16ರಂದು ಸಹಿ ಹಾಕಲಾಗಿದೆ. ಕಳೆದ ವಾರದ ಬಿಬಿಸಿ ವರದಿಯಂತೆ ಭಾರತದಲ್ಲಿಯ ಉದ್ಯೋಗ ಬಿಕ್ಕಟ್ಟಿನಿಂದಾಗಿ ಕಾರ್ಮಿಕರು ಇಸ್ರೇಲ್ ನತ್ತ ಮುಖ ಮಾಡಿದ್ದಾರೆ. ಗಾಝಾ ಯುದ್ದಕ್ಕಿಂತ ಮೊದಲೇ ಮೇ 2023ರಲ್ಲಿ ಇಸ್ರೇಲ್ ಗೆ 42,000 ಭಾರತೀಯ ನಿರ್ಮಾಣ ಕಾರ್ಮಿಕರು ಮತ್ತು ನರ್ಸಿಂಗ್ ಕಾರ್ಮಿಕರನ್ನು ರವಾನಿಸಲು ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.
ಆದರೆ ಹೆಚ್ಚುತ್ತಿರುವ ಶಿಕ್ಷಣದ ಗುಣಮಟ್ಟದೊಂದಿಗೆ ಉದ್ಯೋಗಾವಕಾಶಗಳು ಸುಧಾರಿಸುವುದಿಲ್ಲ,ಬದಲಾಗಿ ಕ್ರಮೇಣ ಇಳಿಕೆಯಾಗುತ್ತಿವೆ ಎಂದಿರುವ ಅಧ್ಯಯನ ವರದಿಯು,ಭಾರತದಾದ್ಯಂತ ಉದ್ಯೋಗ ಸೃಷ್ಟಿಯಲ್ಲಿ ಸಮಗ್ರ ವೈಫಲ್ಯವನ್ನು ಬೆಟ್ಟು ಮಾಡಿದೆ.
2020-21ರಲ್ಲಿ 15ರಿಂದ 29 ವರ್ಷ ವಯೋಮಾನದ ಅನಕ್ಷರಸ್ಥರು ಮತ್ತು ಪ್ರಾಥಮಿಕ ಶಿಕ್ಷಣಕ್ಕಿಂತ ಕಡಿಮೆ ಓದಿರುವ ವರ್ಗಕ್ಕೆ ನಿರುದ್ಯೋಗ ದರವು ಅನುಕ್ರಮವಾಗಿ ಶೇ.0.57 ಮತ್ತು ಶೇ.1.13 ಆಗಿದ್ದರೆ ಹೆಚ್ಚು ಶಿಕ್ಷಣವನ್ನು ಪಡೆದ ವರ್ಗಕ್ಕೆ (ಪದವೀಧರರು ಮತ್ತು ಹೆಚ್ಚಿನ ವಿದ್ಯಾರ್ಹತೆ) ನಿರುದ್ಯೋಗ ದರವು ಶೇ.14.73ರಷ್ಟಿತ್ತು ಎಂದಿರುವ ವರದಿಯು,ಎಲ್ಲ ವರ್ಷಗಳಲ್ಲಿಯೂ ಇದೇ ಮಾದರಿಯು ಕಂಡುಬಂದಿದೆ ಎಂದು ತಿಳಿಸಿದೆ.







