ಭಾರತದಲ್ಲಿ ಸ್ಟಾರ್ಲಿಂಕ್ ಸಾಧನದ ಬೆಲೆ 33,000 ರೂ.; ಮಾಸಿಕ ಯೋಜನೆ ಶುಲ್ಕ 3,000 ರೂ.ಸಾಧ್ಯತೆ

ಸ್ಟಾರ್ಲಿಂಕ್ | PC : X \ @Starlink
ಹೊಸದಿಲ್ಲಿ: ಕಳೆದ ವಾರ ಪರವಾನಿಗೆಯನ್ನು ಪಡೆದುಕೊಂಡಿರುವ ಎಲಾನ್ ಮಸ್ಕ್ ಅವರ ಉಪಗ್ರಹ ಇಂಟರ್ನೆಟ್ ಸೇವೆ ಸ್ಟಾರ್ಲಿಂಕ್ ಮುಂದಿನ ಎರಡು ತಿಂಗಳುಗಳಲ್ಲಿ ಭಾರತದಲ್ಲಿ ಕಾರ್ಯಾಚರಣೆಯನ್ನು ಆರಂಭಿಸಲು ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಕಂಪನಿಯು ಭಾರತೀಯ ಮಾರುಕಟ್ಟೆಗೆ ತನ್ನ ದರ ಸ್ವರೂಪವನ್ನು ಅಂತಿಮಗೊಳಿಸಿದೆ. ಅಗತ್ಯ ಉಪಗ್ರಹ ಡಿಷ್ ಸಾಧನದ ಬೆಲೆಯನ್ನು ಸುಮಾರು 33,000 ರೂ.ಗಳಿಗೆ ನಿಗದಿಗೊಳಿಸಿದ್ದು,ಮಾಸಿಕ ಅನಿಯಮಿತ ಡೇಟಾ ಯೋಜನೆಯ ದರ 3,000 ರೂ.ಗಳಾಗುವ ನಿರೀಕ್ಷೆಯಿದೆ.
ತನ್ನ ಭಾರತೀಯ ಮಾರುಕಟ್ಟೆ ಪ್ರವೇಶ ಕಾರ್ಯತಂತ್ರದ ಭಾಗವಾಗಿ ಪ್ರತಿ ಸಾಧನದ ಖರೀದಿಯೊಂದಿಗೆ ಒಂದು ತಿಂಗಳು ಉಚಿತ ಪ್ರಾಯೋಗಿಕ ಅವಧಿಯನ್ನು ನೀಡಲು ಸ್ಟಾರ್ಲಿಂಕ್ ಯೋಜಿಸಿದೆ, ತನ್ಮೂಲಕ ಗ್ರಾಹಕರು ನಿಯಮಿತ ಮಾಸಿಕ ಪಾವತಿಗಳಿಗೆ ಮುನ್ನ ಸೇವೆಯನ್ನು ಪರೀಕ್ಷಿಸಲು ಅನುವು ಮಾಡಿಕೊಡಲಿದೆ.
ಉಪಗ್ರಹ ಇಂಟರ್ನೆಟ್ ಸೇವೆಯು ಸಾಂಪ್ರದಾಯಿಕ ಬ್ರಾಡ್ಬ್ಯಾಂಡ್ ಮೂಲಸೌಕರ್ಯ ಸ್ಥಾಪನೆಯು ಸವಾಲಿನ ಕೆಲಸವಾಗಿರುವ ಭಾರತದಲ್ಲಿಯ ದೂರದ ಮತ್ತು ಸೌಲಭ್ಯವಂಚಿತ ಪ್ರದೇಶಗಳಲ್ಲಿ ಸಂಪರ್ಕದ ಮೇಲೆ ಗಮನಾರ್ಹ ಪರಿಣಾಮವನ್ನು ಬೀರಲಿದೆ ಎಂದು ನಿರೀಕ್ಷಿಸಲಾಗಿದೆ.
ಸ್ಟಾರ್ಲಿಂಕ್ನ ಕೆಳ ಭೂಕಕ್ಷೆ ಉಪಗ್ರಹ ಸಮೂಹವು ಈ ಹಿಂದೆ ಸಾಂಪ್ರದಾಯಿಕ ಪ್ರಾದೇಶಿಕ ನೆಟ್ವರ್ಕ್ಗಳಿಂದ ತಲುಪಲು ಸಾಧ್ಯವಾಗದ ಸ್ಥಳಗಳಿಗೆ ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯವನ್ನು ತಲುಪಿಸುವ ಭರವಸೆಯನ್ನು ನೀಡುತ್ತದೆ.