ಸೂಕ್ತ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನ ಮರುಸ್ಥಾಪಿಸಲಾಗುವುದು: ಅಮಿತ್ ಶಾ

ಅಮಿತ್ ಶಾ | Photo Credit : PTI
ಪಾಟ್ನಾ: ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನದ ಮರುಸ್ಥಾಪನೆ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶದ ಜನತೆಯ ಬೇಡಿಕೆಗಳ ಕುರಿತು ಉತ್ತಮ ನಿರ್ಣಯವನ್ನು ಸೂಕ್ತ ಸಮಯದಲ್ಲಿ ಕೈಗೊಳ್ಳಲಾಗುವುದು ಎಂದು ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದರು.
ಪಾಟ್ನಾದಲ್ಲಿ ಮಾಧ್ಯಮ ಸಂಸ್ಥೆಯೊಂದು ಆಯೋಜಿಸಲಾಗಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅಮಿತ್ ಶಾ, “370ನೇ ವಿಧಿಯ ರದ್ದತಿ ನಂತರ ಜಮ್ಮು ಮತ್ತು ಕಾಶ್ಮೀರದ ಸ್ಥಿತಿ ಬದಲಾಗಿದ್ದು, ಕಳೆದ ಒಂಭತ್ತು ತಿಂಗಳಲ್ಲಿ ಯಾವುದೇ ಸ್ಥಳೀಯ ಉಗ್ರಗಾಮಿಗಳು ಭಯೋತ್ಪಾದಕ ಸಂಘಟನೆಗಳನ್ನು ಸೇರ್ಪಡೆಯಾಗಿಲ್ಲ” ಎಂದು ತಿಳಿಸಿದರು.
“1990ರಿಂದ ಪ್ರತ್ಯೇಕತಾವಾದಕ್ಕೆ ಸಾಕ್ಷಿಯಾಗಿದ್ದ ಜಮ್ಮು ಮತ್ತು ಕಾಶ್ಮೀರರದಲ್ಲಿ ಇದು ಗುಣಾತ್ಮಕ ಬದಲಾವಣೆಯಾಗಿದೆ. ಈ ಹಿಂದೆ ಗಡಿಯ ಮೂಲಕ ಭಯೋತ್ಪಾದಕರನ್ನು ಕಳಿಸುವ ಅಗತ್ಯವೇ ಪಾಕಿಸ್ತಾನಕ್ಕಿರಲಿಲ್ಲ. ಅವರು ಮಕ್ಕಳ ಕೈಯಲ್ಲಿ ಶಸ್ತ್ರಾಸ್ತ್ರಗಳನ್ನಿಡುತ್ತಿದ್ದರು. ಆದರೀಗ ಪರಿಸ್ಥಿತಿ ಬದಲಾಗಿದೆ. ಈಗ ಜಮ್ಮು ಮತ್ತು ಕಾಶ್ಮೀರದ ಜನತೆ ಇಡೀ ದೇಶಕ್ಕೆ ನಾವು ಸೇರಿದ್ದೇವೆ ಹಾಗೂ ಇಡೀ ದೇಶ ತಮಗೆ ಸೇರಿದೆ ಎಂದು ಭಾವಿಸುತ್ತಿದ್ದಾರೆ”, ಎಂದು ಹೇಳಿದರು.
“ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಯಾಗಿದೆ. ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆದಿವೆ. ಹಾಗೆಯೇ, ವಿಧಾನಸಭಾ ಚುನಾವಣೆಗಳೂ ನಡೆದಿವೆ. ಇಷ್ಟರಲ್ಲೇ ರಾಜ್ಯಸಭಾ ಚುನಾವಣೆಗಳೂ ನಡೆಯಲಿವೆ” ಎಂದು ಅವರು ತಿಳಿಸಿದರು.







