"ರಾಜ್ಯಗಳು ವಿಫಲವಾಗಿವೆ" : ಕೈಗೆಟುಕುವ ದರದಲ್ಲಿ ಔಷಧಿಗಳ ಅಲಭ್ಯತೆ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ

ಸಾಂದರ್ಭಿಕ ಚಿತ್ರ (credit: Meta AI)
ಹೊಸದಿಲ್ಲಿ: ಕೈಗೆಟಕುವ ದರದಲ್ಲಿ ವೈದ್ಯಕೀಯ ಸೇವೆ ಮತ್ತು ಮೂಲಸೌಕರ್ಯವನ್ನು ಒದಗಿಸಲು ರಾಜ್ಯ ಸರಕಾರಗಳು ವಿಫಲವಾಗಿವೆ ಎಂದು ಸುಪ್ರೀಂ ಕೋರ್ಟ್ ಅಸಮಾಧಾನವನ್ನು ವ್ಯಕ್ತಪಡಿಸಿದೆ.
ಸಮಾಜದ ಬಡ ವರ್ಗಗಳ ಜನರಿಗೆ ಕಡಿಮೆ ದರದಲ್ಲಿ ಔಷಧಿಗಳನ್ನು ವಿತರಿಸಲು ರಾಜ್ಯಗಳು ವಿಫಲವಾಗಿವೆ. ಇದು ಖಾಸಗಿ ಆಸ್ಪತ್ರೆಗಳಿಗೆ ಅನುಕೂಲ ಉಂಟು ಮಾಡಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಮತ್ತು ಅವರ ಕುಟುಂಬಸ್ಥರಿಗೆ ಔಷಧಿಗಳು, ವೈದ್ಯಕೀಯ ಸಾಧನಗಳು ಮತ್ತು ಇತರ ಆರೈಕೆ ವಸ್ತುಗಳನ್ನು ಆಸ್ಪತ್ರೆಯೊಳಗಿನ ಔಷಧಾಲಯಗಳಿಂದಲೇ ಖರೀದಿಸಲು ಖಾಸಗಿ ಆಸ್ಪತ್ರೆಗಳಿಗೆ ಒತ್ತಾಯ ಮಾಡದಂತೆ ನಿರ್ದೇಶನ ನೀಡುವಂತೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ಎನ್ಕೆ ಸಿಂಗ್ ಅವರ ಪೀಠವು ಆಲಿಸಿದೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ಕುರಿತು ನಿಯಂತ್ರಣಾ ಕ್ರಮಗಳನ್ನು ತೆಗೆದುಕೊಳ್ಳಲು ವಿಫಲವಾಗಿದೆ, ಇದರಿಂದಾಗಿ ರೋಗಿಗಳನ್ನು ಶೋಷಣೆ ಮಾಡಲಾಗುತ್ತಿದೆ ಎಂದು ಕೋರ್ಟ್ನಲ್ಲಿ ವಾದಿಸಲಾಗಿದೆ. ಈ ವೇಳೆ ನ್ಯಾಯಮೂರ್ತಿ ಸೂರ್ಯಕಾಂತ್, ನಾವು ನಿಮ್ಮ ಮಾತಿಗೆ ಒಪ್ಪುತ್ತೇವೆ. ಆದರೆ, ಇದನ್ನು ಹೇಗೆ ನಿಯಂತ್ರಿಸುವುದು? ಎಂದು ಪ್ರಶ್ನಿಸಿದ್ದಾರೆ.
ಸರಿಯಾದ ವೈದ್ಯಕೀಯ ಆರೈಕೆಯನ್ನು ಖಚಿತಪಡಿಸಿಕೊಳ್ಳುವುದು ರಾಜ್ಯಗಳ ಕರ್ತವ್ಯ. ಕೆಲವು ರಾಜ್ಯಗಳು ಅಗತ್ಯವಾದ ವೈದ್ಯಕೀಯ ವ್ಯವಸ್ಥೆ ಕಲ್ಪಿಸದಿರುವುದು ಖಾಸಗಿ ಆಸ್ಪತ್ರೆಗಳಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ನ್ಯಾಯಾಲಯವು ಈ ವೇಳೆ ಗಮನಿಸಿತು.
ಔಷಧಿ ಅಥವಾ ವೈದ್ಯಕೀಯ ಸಾಧನ ಬೇರೆಡೆ ಅಗ್ಗವಾಗಿ ಲಭ್ಯವಿದ್ದಾಗ ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ಮತ್ತು ಅವರ ಕುಟುಂಬಸ್ಥರನ್ನು ತಮ್ಮದೇ ಔಷಧಾಲಯಗಳಿಂದ ಖರೀದಿಸಲು ಒತ್ತಾಯಿಸುವುದಿಲ್ಲ ಎಂಬುವುದನ್ನು ಖಚತಪಡಿಸುವಂತೆ ಇದೇ ವೇಳೆ ನ್ಯಾಯಾಲಯ ಸೂಚಿಸಿದೆ.
ಈ ವಿಚಾರವಾಗಿ ಈ ಹಿಂದೆ ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಿತ್ತು. ಒಡಿಶಾ, ಅರುಣಾಚಲ ಪ್ರದೇಶ, ಛತ್ತೀಸ್ಗಢ, ಬಿಹಾರ, ತಮಿಳುನಾಡು, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳು ಪ್ರತಿ ಅಫಿಡವಿಟ್ಗಳನ್ನು ಸಲ್ಲಿಸಿದೆ.







