ಗುಜರಾತ್ | 'ಅತ್ಯಾಚಾರ ತಪ್ಪಿಸಲು ಮನೆಯಲ್ಲೇ ಇರಿ': ವಿವಾದಕ್ಕೆ ಗುರಿಯಾದ ಸಂಚಾರಿ ಪೊಲೀಸರ ಪೋಸ್ಟರ್

Photo credit: X/@hdraval93
ಅಹ್ಮದಾಬಾದ್: ಗುಜರಾತ್ನ ಅಹ್ಮದಾಬಾದ್ ನಗರ ಸಂಚಾರಿ ಪೊಲೀಸರು ಹಾಕಿರುವ ‘ಮಹಿಳಾ ಸುರಕ್ಷತೆ’ ಕುರಿತ ಪೋಸ್ಟರ್ಗಳು ವಿವಾದಕ್ಕೆ ಕಾರಣವಾಗಿದೆ.
ಸೋಲಾ ಮತ್ತು ಚಂದ್ಲೋಡಿಯಾ ಪ್ರದೇಶಗಳಲ್ಲಿ ಗುಜರಾತಿ ಭಾಷೆಯಲ್ಲಿ ಬರೆದ ಪೋಸ್ಟರ್ಗಳು ಕಂಡುಬಂದಿವೆ. ಅಹಮದಾಬಾದ್ ಟ್ರಾಫಿಕ್ ಪೊಲೀಸರನ್ನು ಪ್ರಾಯೋಜಕರು ಎಂದು ಉಲ್ಲೇಖಿಸಿದ್ದಾರೆ.
ʼತಡರಾತ್ರಿಯ ಪಾರ್ಟಿಗಳಿಗೆ ಹಾಜರಾಗುವುದು ಅತ್ಯಾಚಾರ ಅಥವಾ ಸಾಮೂಹಿಕ ಅತ್ಯಾಚಾರಕ್ಕೆ ಆಹ್ವಾನ ನೀಡಬಹುದು’. ‘ನಿಮ್ಮ ಸ್ನೇಹಿತರನ್ನು ಕತ್ತಲೆಯಾದ, ಪ್ರತ್ಯೇಕ ಪ್ರದೇಶಗಳಿಗೆ ಕರೆದೊಯ್ಯಬೇಡಿ.ʼ ಈ ರೀತಿ ನಗರ ಸಂಚಾರ ಪೊಲೀಸರು ಹಾಕಿರುವ ‘ಮಹಿಳಾ ಸುರಕ್ಷತೆ’ ಕುರಿತ ಪೋಸ್ಟರ್ಗಳು ದೊಡ್ಡ ದಪ್ಪ ಅಕ್ಷರಗಳಲ್ಲಿ ಕಂಡು ಬಂದಿದೆ.
ಈ ಪೋಸ್ಟರ್ಗಳು ಅಸಭ್ಯವಾಗಿದೆ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಮಹಿಳೆಯರನ್ನು ಪರೋಕ್ಷವಾಗಿ ದೂಷಿಸುವಂತಿದೆ ಎಂದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ನಗರ ಸಂಚಾರ ಪೊಲೀಸರ ಹೊಣೆಗಾರಿಕೆಯ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿದೆ.
ಸಂಚಾರ ವಿಭಾಗದ ಡಿಸಿಪಿ ನೀತಾ ದೇಸಾಯಿ ಮತ್ತು ಎಸಿಪಿ ಶೈಲೇಶ್ ಮೋದಿ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು "ಸಂಚಾರಿ ಜಾಗೃತಿಗಾಗಿ" ಪೋಸ್ಟರ್ಗಳನ್ನು ಹಾಕಲು ʼಸತರ್ಕ್ತಾʼ ಗ್ರೂಪ್ಗೆ ಅನುಮತಿ ನೀಡಲಾಗಿದೆ ಎಂದು ದೃಢಪಡಿಸಿದರು.
ʼಪೋಸ್ಟರ್ನಲ್ಲಿ ಉಲ್ಲೇಖಿಸಿದ್ದ ವಿವಾದಾತ್ಮಕ ವಿಷಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ಭಾರೀ ಟೀಕೆ ವ್ಯಕ್ತವಾಗಿದೆ. ಈಗ ಪೋಸ್ಟರ್ಗಳನ್ನು ತೆಗೆದುಹಾಕಲಾಗಿದೆʼ ಎಂದು ಎಸಿಪಿ ಶೈಲೇಶ್ ಮೋದಿ ಹೇಳಿದ್ದಾರೆ.
ʼಸ್ಥಳೀಯ ಬರಹಗಾರರೊಬ್ಬರು ನಡೆಸುತ್ತಿರುವ ಸತರ್ಕ್ತಾ ಗ್ರೂಪ್ಗೆ ಸಂಚಾರ ಜಾಗೃತಿ ಪೋಸ್ಟರ್ಗಳನ್ನು ಹಾಕಲು ಅನುಮತಿ ನೀಡಲಾಗಿದೆ ಹೊರತು ಈ ರೀತಿಯ ಪೋಸ್ಟರ್ ಹಾಕುವುದಕ್ಕೆ ಅನುಮತಿಸಲಾಗಿಲ್ಲ. ಅದು ಸ್ವೀಕಾರಾರ್ಹವಲ್ಲʼ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎನ್ ಎನ್ ಚೌಧರಿ ಹೇಳಿದ್ದಾರೆ.







