ರಫ್ತು ಉತ್ತೇಜನಕ್ಕೆ ಕ್ರಮ: ಕಾಶ್ಮೀರ- ದೆಹಲಿ ನಡುವೆ ರ್ಯಾಪಿಡ್ ಕಾರ್ಗೋ ರೈಲು

PC: x.com/shantanuvaibhav
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಉತ್ಪನ್ನಗಳ ರಫ್ತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಕಾಶ್ಮೀರದ ಬುದ್ಗಾಮ್ ನಿಂದ ದೆಹಲಿಯ ಆದರ್ಶ ನಗರಕ್ಕೆ ಜಾಯಿಂಟ್ ಪಾರ್ಸೆಲ್ ಪ್ರಾಡಕ್ಟ್ ರ್ಯಾಪಿಡ್ ಕಾರ್ಗೋ ಸಂಚಾರಕ್ಕೆ ರೈಲ್ವೆ ಮಂಡಳಿ ಬುಧವಾರ ಅನುಮೋದನೆ ನೀಡಿದೆ. ಉತ್ತರ ರೈಲ್ವೆಯ ಜಮ್ಮು ವಿಭಾಗ ಪ್ರತಿದಿನ ಈ ರೈಲನ್ನು ಓಡಿಸಲಿದೆ. ಯಾವುದೇ ಕೇಂದ್ರಾಡಳಿತ ಪ್ರದೇಶದಿಂದ ಇಂಥ ಸೇವೆ ಅರಂಭವಾಗಿರುವುದು ಇದೇ ಮೊದಲು.
ಜಮ್ಮು ಮತ್ತು ಕಾಶ್ಮೀರದ ವ್ಯಾಪಾರಕ್ಕೆ ಉತ್ತೇಜನ ನಿಡುವ ಉದ್ದೇಶದಿಂದ ಈ ಸೇವೆ ಅರಂಭಿಸಲಾಗಿದ್ದು, ಕಾಶ್ಮೀರದ ಪ್ರಮುಖ ಉತ್ಪನ್ನಗಳಾದ ಸೇಬು, ಕೇಸರಿ, ಒಣಹಣ್ಣುಗಳು ಮತ್ತು ಆಕ್ರೋಟ್, ಪಶ್ಮಿನಾ ಶಾಲುಗಳು, ಕಂಬಳಿಗಳು ಮತ್ತು ಇತರ ಕರಕುಶಲ ಸಾಮಗ್ರಿಗಳು ದೇಶದ ಮೂಲೆ ಮೂಲೆಗಳು ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಸಾಗಾಣಿಕೆಯಾಗಲಿವೆ ಎಂದು ಹಿರಿಯ ವಾಣಿಜ್ಯ ವ್ಯವಸ್ಥಾಪಕ ಉಚಿತ್ ಸಿಂಗಾಲ್ ಹೇಳಿದ್ದಾರೆ.
ಈ ರೈಲು ತನ್ನ ಗಮ್ಯ ನಿಲ್ದಾಣವನ್ನು 23 ಗಂಟೆಗಳಲ್ಲಿ ತಲುಪಲಿದೆ ಎಂದು ಅವರು ವಿವರಿಸಿದರು. ಇದು ಸೀಟಿಂಗ್ ಕಮ್ ಲಗೇಜ್ ರ್ಯಾಕ್ಗಳನ್ನು ಹೊಂದಿರುತ್ತದೆ ಹಾಗೂ ಎಂಟು ರ್ಯಾಕ್ಗಳನ್ನು ಒಳಗೊಂಡಿರುತ್ತದೆ. ಬರಿ ಬ್ರಹಮನ್ ನಿಲ್ದಾಣಗಳಲ್ಲಿ ಸರಕು ಲೋಡಿಂಗ್ ಮತ್ತು ಅನ್ಲೋಡಿಂಗ್ ವ್ಯವಸ್ಥೆಯನ್ನು ಹೊಂದಿರುತ್ತದೆ ಎಂದು ಹೇಳೀದರು.





