ನಿಮ್ಮ ಪ್ರದರ್ಶನಗಳಲ್ಲಿ ಮುಂಬೈ ಅನ್ನು ಬಾಂಬೆ ಅಥವಾ ಬಂಬೈ ಎಂದು ಕರೆಯುವುದನ್ನು ನಿಲ್ಲಿಸಿ: ಕಪಿಲ್ ಶರ್ಮಗೆ ಎಂಎನ್ಎಸ್ ಎಚ್ಚರಿಕೆ

ಕಪಿಲ್ ಶರ್ಮ | PC ; @SonyTV
ಮುಂಬೈ: ತಮ್ಮ ಪ್ರದರ್ಶನಗಳಲ್ಲಿ ಮುಂಬೈ ಅನ್ನು ಬಾಂಬೆ ಅಥವಾ ಬಂಬೈ ಎಂದು ಕರೆಯುವ ಮೂಲಕ, ಅದನ್ನು ಅವಮಾನಿಸಲಾಗುತ್ತಿದೆ ಎಂದು ಕಾಮೆಡಿಯನ್ ನಟ ಕಪಿಲ್ ಶರ್ಮಗೆ ವಿರುದ್ಧ ಆರೋಪಿಸಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆ, ಈ ರೂಢಿ ನಿಲ್ಲದಿದ್ದರೆ, ಪ್ರಬಲ ಹೋರಾಟ ನಡೆಸಬೇಕಾಗುತ್ತದೆ ಎಂದೂ ಎಚ್ಚರಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಚಲನಚಿತ್ರ ವಿಭಾಗದ ಮುಖ್ಯಸ್ಥ ಅಮೇಯ ಖೋಪ್ಕರ್, ಕಪಿಲ್ ಶರ್ಮಗೆ ಮೇಲಿನಂತೆ ಎಚ್ಚರಿಕೆ ನೀಡಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನ ಶಿವಸೇನೆ (ಉದ್ಧವ್ ಬಣ) ಹಾಗೂ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ನಡುವೆ ಮೈತ್ರಿ ಏರ್ಪಡುವ ಸಾಧ್ಯತೆ ಇದೆ ಎಂಬ ವದಂತಿಗಳ ಬೆನ್ನಿಗೇ, ಉದ್ಧವ್ ಠಾಕ್ರೆ ಅವರು ತಮ್ಮ ಸೋದರ ಸಂಬಂಧಿ ರಾಜ್ ಠಾಕ್ರೆ ನಿವಾಸಕ್ಕೆ ಭೇಟಿ ನೀಡಿದ್ದರು. ಈ ಭೇಟಿಯ ಬೆನ್ನಿಗೇ ಎಂಎನ್ಎಸ್ ನಿಂದ ಈ ಎಚ್ಚರಿಕೆ ಹೊರ ಬಿದ್ದಿದೆ.
“ಈ ನಗರದ ಹೆಸರು ಮುಂಬೈ. ಆದರೆ, ಕಪಿಲ್ ಶರ್ಮ ಶೋನಲ್ಲಿ ಈ ಹಿಂದಿನಿಂದಲೂ ಹಾಗೂ ಈ ಋತು ಪ್ರಾರಂಭಕ್ಕೂ ಹಿಂದಿನ ಋತುವಿಗೂ ಮುನ್ನ ಕೂಡಾ ಮುಂಬೈ ಅನ್ನು ಬಾಂಬೆ ಅಥವಾ ಬಂಬೈ ಎಂದು ಉಲ್ಲೇಖಿಸಲಾಗುತ್ತಿದೆ. ನಾವಿದನ್ನು ವಿರೋಧಿಸುತ್ತೇವೆ. ಇದು ಆಕ್ಷೇಪವಲ್ಲ; ಇದು ಆಕ್ರೋಶ. ಈ ನಗರದ ಹೆಸರು ಮುಂಬೈ. ನೀವು ಇತರ ನಗರಗಳನ್ನು ಚೆನ್ನೈ, ಬೆಂಗಳೂರು ಹಾಗೂ ಕೋಲ್ಕತ್ತಾ ಎಂದು ಸಮರ್ಪಕವಾಗಿ ಉಲ್ಲೇಖಿಸಬಹುದಾದರೆ, ನಮ್ಮ ನಗರವನ್ನೇಕೆ ಅವಮಾನಿಸುತ್ತಿದ್ದೀರಿ?” ಎಂದು ಖೋಪ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಪಿಲ್ ಶರ್ಮ ಸದ್ಯ ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗುತ್ತಿರುವ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಎಂಬ ಕಾರ್ಯಕ್ರಮದ ಆತಿಥ್ಯ ವಹಿಸಿದ್ದಾರೆ. ಈ ಕಾರ್ಯಕ್ರಮದ ಮೂರನೆಯ ಋತು ಜೂನ್ 21ರಿಂದ ಪ್ರಾರಂಭಗೊಂಡಿದೆ.







