ಕೇಂದ್ರದ ವಿರುದ್ಧ ಪ್ರತಿಭಟನೆಗಾಗಿ ಟಿಐಎಸ್ಎಸ್ನಿಂದ ಅಮಾನತುಗೊಂಡ ವಿದ್ಯಾರ್ಥಿ ಹೋರಾಟಗಾರ ರಾಮದಾಸ್ ಗೆ ರಿಲೀಫ್
ಪಿಎಚ್ಡಿ ಅಧ್ಯಯನ ಮುಂದುವರಿಸಲು ಅನುಮತಿ

ರಾಮದಾಸ ಪ್ರಿನಿ ಶಿವಾನಂದನ್
ಹೊಸದಿಲ್ಲಿ: ದುರ್ನಡತೆ ಹಾಗೂ ದೇಶದ ಹಿತಾಸಕ್ತಿಗೆ ವಿರುದ್ಧವಾದ ಚಟುವಟಿಕೆಗಳಲ್ಲಿ ತೊಡಗಿದ ಆರೋಪದಲ್ಲಿ ಮುಂಬೈಯ ಟಾಟಾ ಸಮಾಜವಿಜ್ಞಾನ ಸಂಸ್ಥೆ (ಟಿಐಎಸ್ಎಸ್)ಯಿಂದ ಎರಡು ವರ್ಷಗಳ ಕಾಲ ಅಮಾನತುಗೊಂಡಿರುವ ಪಿಎಚ್ಡಿ ಸಂಶೋಧಕ ಹಾಗೂ ವಿದ್ಯಾರ್ಥಿ ಹೋರಾಟಗಾರ ರಾಮದಾಸ ಪ್ರಿನಿ ಶಿವಾನಂದನ್ ಗೆ ಸುಪ್ರೀಂಕೋರ್ಟ್ ನಿರಾಳತೆಯನ್ನು ನೀಡಿದೆ. ಆತ ಪಿಎಚ್ಡಿ ಅಧ್ಯಯನವನ್ನು ಮುಂದುವರಿಸುವುದಕ್ಕೆ ಅನುಮತಿ ನೀಡಿದೆ.
ಕೇಂದ್ರ ಸರಕಾರದ ವಿರುದ್ಧ ದಿಲ್ಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿದ ಹಾಗೂ ಆಯೋಧ್ಯೆ ವಿವಾದದ ಕುರಿತ ಸಾಕ್ಷ್ಯಚಿತ್ರವೊಂದನ್ನು ಆಯೋಜಿಸಿದ್ದಕ್ಕಾಗಿ ರಾಮದಾಸ್ ತನ್ನ ಯಾವುದೇ ಕ್ಯಾಂಪಸ್ ಅನ್ನು ಪ್ರವೇಶಿಸುವುದಕ್ಕೆ ಅವರಿಗೆ ನಿಷೇಧ ವಿಧಿಸಿತ್ತು.
ಎಡಪಂಥೀಯ ವಿದ್ಯಾರ್ಥಿ ಸಂಘಟನೆ ಎಸ್ಎಫ್ಐನ ಕೇಂದ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯನಾದ ರಾಮದಾಸ್ ಅಮಾನತುಗೊಂಡ ಆನಂತರ ಸರಕಾರಿ ಫೆಲೋಶಿಪ್ ಕೂಡಾ ಕಳೆದುಕೊಂಡಿದ್ದರು.
ತನ್ನ ಅಮಾನತನ್ನು ಪ್ರಶ್ನಿಸಿ ರಾಮದಾಸ್ ಮೊದಲಿಗೆ ಬಾಂಬೆ ಹೈಕೋರ್ಟ್ ಮೆಟ್ಟಲೇರಿದ್ದರು. ಆದರೆ ಅವರ ಮನವಿಯನ್ನು ನ್ಯಾಯಾಲಯ ತಳ್ಳಿಹಾಕಿತ್ತು ಹಾಗೂ ರಾಜಕೀಯ ಪ್ರೇರಿತ ಪ್ರತಿಭಟನೆ ನಡೆಸಲು ಆತ ಸಂಸ್ಥೆಯ ಹೆಸರನ್ನು ಬಳಸಿಕೊಂಡಿದ್ದನೆಂಬ ಟಿಐಎಸ್ಎಸ್ನ ವಾದವನ್ನು ಎತ್ತಿಹಿಡಿದಿತ್ತು.
ಆನಂತರ ರಾಮದಾಸ್ ತನ್ನ ವಜಾವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಸರಕಾರಿ ಫೆಲೋಶಿಪ್ಗಳನ್ನು ಸ್ವೀಕರಿಸುವ ವಿದ್ಯಾರ್ಥಿಗಳು ಸರಕಾರವನ್ನು ಟೀಕಿಸುವುದರಿಂದ ದೂರವಿರಬೇಕೆಂಬ ಅಪಾಯಕಾರಿ ಸಂದೇಶವನ್ನು ಆಡಳಿತವು ತನ್ನ ಅಮಾನತುಗೊಳಿಸುವ ಮೂಲಕ ನೀಡಿದೆ ಎಂದು ಅವರು ವಾದಿಸಿದ್ದರು. ಭಾರತೀಯ ಶಿಕ್ಷಣವೇತ್ತರಲ್ಲಿ ಭಿನ್ನಾಭಿಪ್ರಾಯದ ಹಾಗೂ ವಿಮರ್ಶಾತ್ಮಕ ಚಿಂತನೆಯನ್ನು ಸರಕಾರವು ಪರಿಣಾಮಕಾರಿಯಾಗಿ ಹೊಸಕಿ ಹಾಕುತ್ತಿದೆ ಎಂದು ರಾಮದಾಸ್ ಅರ್ಜಿಯಲ್ಲಿ ವಾದಿಸಿದ್ದರು.
ಅರ್ಜಿಯ ಆಲಿಕೆ ನಡೆಸಿದ ನ್ಯಾಯಪೀಠವು, ರಾಮದಾಸ್ ಅವರನ್ನು ಟಿಐಎಸ್ಎಸ್ ಎರಡು ವರ್ಷಗಳ ಅವಧಿಗೆ ಅಮಾನತುಗೊಳಿಸಿದ್ದು, ಆ ಅವಧಿಯನ್ನು ಇಲ್ಲಿಗೇ ಸೀಮಿತಗೊಳಿಸಬೇಕು ಮತ್ತು ರಾಮದಾಸ್ಅವರನ್ನು ಮರುಸ್ಥಾಪಿಸುವಂತೆ ಸರ್ವೋಚ್ಚ ನಾಯಾಲಯ ಆದೇಶಿಸಿತ್ತು.
ರಾಮದಾಸ್ ಅವರನ್ನು 2024ರ ಎಪ್ರಿಲ್ 18ರಂದು ಟಿಐಎಸ್ಎಸ್ ಅಮಾನತುಗೊಳಿಸಿತ್ತು.







