ಉತ್ತರ ಪ್ರದೇಶ| ಶುಲ್ಕ ಪಾವತಿಸದ ಕಾರಣ ಪರೀಕ್ಷೆಗೆ ಬರೆಯಲು ನಿರಾಕರಿಸಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ: ಕಾಲೇಜು ಪ್ರಾಂಶುಪಾಲ ಬಂಧನ

ಸಾಂದರ್ಭಿಕ ಚಿತ್ರ
ಮುಝಫ್ಫರ್ನಗರ: ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಝಫ್ಫರ್ನಗರ ಜಿಲ್ಲೆಯ ಬುಢಾಣಾದ ಡಿಎವಿ ಪಿಜಿ ಕಾಲೇಜಿನ ಪ್ರಾಂಶುಪಾಲ ಪ್ರದೀಪ್ ಕುಮಾರ್ ಅವರನ್ನು ಶನಿವಾರ ರಾತ್ರಿ ಬಂಧಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ. ತನ್ನ ಸೆಮಿಸ್ಟರ್ ಶುಲ್ಕಗಳನ್ನು ಪಾವತಿಸದ್ದರಿಂದ ಕಾಲೇಜಿನ ಆಡಳಿತವು ಪರೀಕ್ಷೆಗೆ ಬರೆಯಲು ಅವಕಾಶ ನಿರಾಕರಿಸಿದ್ದಕ್ಕಾಗಿ ನ.8ರಂದು ಉಜ್ವಲ್ ರಾಣಾ(20) ಎಂಬ ಎರಡನೇ ವರ್ಷದ ಬಿಎ ವಿದ್ಯಾರ್ಥಿ ಕ್ಯಾಂಪಸ್ನಲ್ಲಿ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಘಟನೆಯ ಬಳಿಕ ತಲೆ ಮರೆಸಿಕೊಂಡಿದ್ದ ಕುಮಾರ್ ಅವರನ್ನು ನ.15ರಂದು ರಾತ್ರಿ ಬೈವಾಲಾ ಚೌಕಿ ಬಳಿಯ ಧಾಬಾದ ಸಮೀಪ ಬಂಧಿಸಲಾಗಿದ್ದು, ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ ಎಂದು ಅಧಿಕಾರಿಗಳು ತಿಳಿಸಿದರು.
ರಾಣಾ ಬಾಕಿಯಿದ್ದ ಸುಮಾರು 7,000 ರೂ.ಗಳ ಪೈಕಿ 1,750 ರೂ.ಗಳನ್ನು ಪಾವತಿಸಿದ್ದರು.
ಶೇ.75ರಷ್ಟು ಸುಟ್ಟ ಗಾಯಗಳಾಗಿದ್ದ ವಿದ್ಯಾರ್ಥಿಯನ್ನು ದಿಲ್ಲಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ನ.9ರಂದು ಕೊನೆಯುಸಿರೆಳೆದಿದ್ದರು.
ತನ್ನ ಸಾವಿಗೆ ಒಂದು ದಿನ ಮೊದಲು ರೆಕಾರ್ಡ್ ಮಾಡಲಾದ ವೀಡಿಯೊದಲ್ಲಿ, ಪ್ರಾಂಶುಪಾಲ ಪ್ರದೀಪ್ ಕುಮಾರ್ ತನ್ನನ್ನು ಸಾರ್ವಜನಿಕವಾಗಿ ಅವಮಾನಿಸಿದ್ದರು ಮತ್ತು ದೈಹಿಕ ಹಲ್ಲೆ ನಡೆಸಿದ್ದರು ಎಂದು ಆರೋಪಿಸಿರುವ ರಾಣಾ, ತಾನು ಶುಲ್ಕದ ವಿವಾದವನ್ನು ಎತ್ತಿದಾಗ ಪೋಲಿಸರು ತನ್ನನ್ನು ಥಳಿಸಿದ್ದರು ಎಂದು ಹೇಳಿದ್ದಾರೆ. ಅವರ ಸಾವಿನ ಬಳಿಕ ಪೋಲಿಸರು ಎಫ್ಐಆರ್ನಲ್ಲಿ ಹೆಚ್ಚು ಗಂಭೀರ ಕಲಮ್ಗಳನ್ನು ಮತ್ತು ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪವನ್ನು ಸೇರಿಸಿದ್ದಾರೆ.
ಇದು ಪ್ರಕರಣದಲ್ಲಿ ಎರಡನೇ ಪ್ರಮುಖ ಬಂಧನವಾಗಿದೆ. ಘಟನೆ ನಡೆದ ಎರಡು ದಿನಗಳ ಬಳಿಕ ಕಾಲೇಜಿನ ದೈಹಿಕ ತರಬೇತಿ ಬೋಧಕ ಸಂಜಯ ಕುಮಾರ್ ಅವರನ್ನು ಬಂಧಿಸಲಾಗಿತ್ತು. ಕಾಲೇಜಿನ ಮ್ಯಾನೇಜರ್ ಅರವಿಂದ ಕುಮಾರ ಗರ್ಗ್, ಪೋಲಿಸ್ ಅಧಿಕಾರಿಗಳಾದ ಎಸ್ಐ ನಂದಕಿಶೋರ, ಕಾನ್ಸ್ಟೇಬಲ್ ಜ್ಞಾನವೀರ ಮತ್ತು ವಿನೀತ ಕುಮಾರ ಅವರನ್ನೂ ಆರೋಪಿಗಳನ್ನಾಗಿ ಹೆಸರಿಸಲಾಗಿದೆ.
ತನಿಖಾಧಿಕಾರಿಗಳು ದಾಖಲೆಗಳು,ಸಿಸಿಟಿವಿ ದೃಶ್ಯಾವಳಿಗಳು ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಸಂಗ್ರಹಿಸುತ್ತಿದ್ದು,ಮೂವರು ಪೋಲಿಸರನ್ನು ರಜೆಯ ಮೇಲೆ ಕಳುಹಿಸಲಾಗಿದೆ ಎಂದು ಮುಝಫ್ಫರ್ನಗರ ಎಸ್ಪಿ ಸಂಜಯ ಕುಮಾರ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಕಾಲೇಜಿನ ಹೊರಗೆ ಕುಟುಂಬ ಸದಸ್ಯರು ಮತ್ತು ವಿದ್ಯಾರ್ಥಿ ಗುಂಪುಗಳು ನಿರಂತರ ಪ್ರತಿಭಟನೆಯನ್ನು ನಡೆಸುತ್ತಿದ್ದು, ಮ್ಯಾಜಿಸ್ಟೀರಿಯಲ್ ತನಿಖೆ ಮತ್ತು ಒಂದು ಕೋಟಿ ರೂ. ಪರಿಹಾರಕ್ಕೆ ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡ ರೈತ ನಾಯಕ ರಾಕೇಶ್ ಟಿಕಾಯತ್ ಅವರು, ವ್ಯವಸ್ಥೆಯು ಉಜ್ವಲ ರಾಣಾರನ್ನು ಕೊಂದಿದೆ. ಅವರು ಮೂರು ದಿನಗಳ ಕಾಲ ಪೋಲಿಸ್ ಆಡಳಿತ ಮತ್ತು ಪ್ರಾಂಶುಪಾಲರ ನಡುವೆ ಎಡತಾಕುತ್ತಿದ್ದರು, ಆದರೆ ಯಾರೂ ಅವರ ಅಹವಾಲನ್ನು ಆಲಿಸಿರಲಿಲ್ಲ ಎಂದು ಹೇಳಿದರು.
ಘಟನೆಯ ಬಳಿಕ ರಾಣಾರ ಸೋದರಿ ಸಲೋನಿ ಮೊದಲ ದೂರನ್ನು ದಾಖಲಿಸಿದ್ದರು.
ರಾಣಾ ಭಾಗಪತ್ನ ಭದಾಲ್ ಗ್ರಾಮದ ನಿವಾಸಿಯಾಗಿದ್ದು, ಅವರ ತಂದೆ ಕಬ್ಬು ಬೆಳೆಗಾರರಾಗಿದ್ದರೆ ತಾಯಿ ನಿಧನರಾಗಿದ್ದಾರೆ.
‘ನನಗೇನಾದರೂ ಸಂಭವಿಸಿದರೆ ಪ್ರಾಂಶುಪಾಲರು ಮತ್ತು ಮೂವರು ಪೋಲಿಸ್ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ’ ಎಂದು ರಾಣಾ ತನ್ನ ರೆಕಾರ್ಡ್ ಮಾಡಿದ್ದ ಸಂದೇಶದಲ್ಲಿ ಹೇಳಿದ್ದರು.







