ದೆಹಲಿ ಮೆಟ್ರೋ ಸ್ಟೇಷನ್ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ; ನಾಲ್ವರು ಶಿಕ್ಷಕರ ಅಮಾನತು

ಸಾಂದರ್ಭಿಕ ಚಿತ್ರ PC: PTI
ಹೊಸದಿಲ್ಲಿ: ಶಿಕ್ಷಕರ ಕಿರುಕುಳದಿಂದ ಬೇಸತ್ತು ದೆಹಲಿ ಮೆಟ್ರೋ ರೈಲು ನಿಲ್ದಾಣದಲ್ಲಿ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಸಾರ್ವಜನಿಕರ ಆಕ್ರೋಶ ಭುಗಿಲೆದ್ದ ಹಿನ್ನೆಲೆಯಲ್ಲಿ ನಾಲ್ವರು ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ.
ವಿದ್ಯಾರ್ಥಿಯನ್ನು ಒಂದು ವರ್ಷದಿಂದೀಚೆಗೆ ಶಿಕ್ಷಕರು ನಿಂದಿಸುತ್ತಿದ್ದರು ಹಾಗೂ ಕಿರುಕುಳ ನೀಡುತ್ತಿದ್ದರು ಎಂದು ಪೋಷಕರು ಆಪಾದಿಸಿದ್ದು, ಖಿನ್ನತೆಗೆ ಒಳಗಾದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಲಹಾತಜ್ಞರು ಮತ್ತು ಶಿಕ್ಷಕರಿಗೆ ಮಾಹಿತಿ ನೀಡಿದ್ದ ಎಂದು ಕುಟುಂಬದವರು ಹೇಳಿದ್ದಾರೆ.
"ನಿಮ್ಮ ವಿರುದ್ಧ ತಿಸ್ ಹಜಾರಿ ಕೋರ್ಟ್ ನಲ್ಲಿ ನ.19ರಂದು ಎಫ್ಐಆರ್ ದಾಖಲಾಗಿರುವುದು ಶಾಲೆಯ ಗಮನಕ್ಕೆ ಬಂದಿದ್ದು, ಪ್ರಕರಣದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಆರೋಪಗಳ ಗಂಭೀರತೆ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನಿಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೆ ಮತ್ತು ಮುಂದಿನ ಆದೇಶದವರೆಗೆ ಅಮಾನತಿನಲ್ಲಿ ಇರುತ್ತೀರಿ" ಎಂದು ನಾಲ್ವರು ಶಿಕ್ಷಕರಿಗೆ ನೀಡಿದ ಪತ್ರದಲ್ಲಿ ವಿವರಿಸಲಾಗಿದೆ.
ವಿದ್ಯಾರ್ಥಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ಆತನ ಪೋಷಕರುಮತ್ತು ಸ್ನೇಹಿತರು ಅಶೋಕ ಪ್ಯಾಲೇಸ್ ನಲ್ಲಿರುವ ಶಾಲೆಯ ಹೊರಗೆ ಪ್ರತಿಭಟನೆ ನಡೆಸಿ, ಆರೋಪಿ ಶಿಕ್ಷಕರ ವಿರುದ್ಧ ಮತ್ತು ಶಾಲಾ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಿದರು.







