ಆತ್ಮಹತ್ಯೆಗೈದ ಬಾಲಕಿ 40 ನಿಮಿಷ ತರಗತಿಯಲ್ಲಿ ತೀವ್ರ ಕಿರುಕುಳ ಅನುಭವಿಸಿದ್ದಳು: ತನಿಖಾ ಸಮಿತಿ ವರದಿ

ಜೈಪುರ, ನ. 19: ಅಕ್ಟೋಬರ್ ಒಂದರಂದು ಜೈಪುರದ ತನ್ನ ಶಾಲಾ ಕಟ್ಟಡದ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಒಂಭತ್ತು ವರ್ಷದ ಬಾಲಕಿಯು ತನ್ನ ಅಂತಿಮ ತರಗತಿಯಲ್ಲಿ 40 ನಿಮಿಷಗಳ ಕಾಲ ತೀವ್ರ ಕಿರುಕುಳಕ್ಕೆ ಒಳಗಾಗಿದ್ದಳು ಎಂದು ತನಿಖಾ ಸಮಿತಿಯೊಂದು ಹೇಳಿದೆ.
ತನ್ನ 5-7 ಸಹಪಾಠಿಗಳು ನೀಡುತ್ತಿದ್ದ ಕಿರುಕುಳದ ಬಗ್ಗೆ ಬಾಲಕಿಯು ಶಿಕ್ಷಕರಿಗೆ ಪದೇ ಪದೇ ದೂರು ನೀಡಿದ್ದರೂ, ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ಅದು ತಿಳಿಸಿದೆ. ನಾಲ್ಕನೇ ತರಗತಿಯ ವಿದ್ಯಾರ್ಥಿನಿಯು ಶಾಲಾ ಕಟ್ಟಡದಿಂದ ಹಾರುವುದು ಸಿಸಿಟಿವಿ ಕ್ಯಾಮರದಲ್ಲಿ ದಾಖಲಾಗಿದೆ.
ಐದರಿಂದ ಏಳು ಸಹಪಾಠಿಗಳು ಬಾಲಕಿಗೆ ನಿರಂತರವಾಗಿ ಕಿರುಕುಳ ನೀಡುತ್ತಿರುವುದನ್ನು ತರಗತಿಯಲ್ಲಿರುವ ಸಿಸಿಟಿವಿ ದೃಶ್ಯಗಳು ತೋರಿಸಿವೆ ಎಂದು ಐವರು ಸದಸ್ಯರ ತನಿಖಾ ಸಮಿತಿಯ ಮುಖ್ಯಸ್ಥ, ಜಿಲ್ಲಾ ಶಿಕ್ಷಣಾಧಿಕಾರಿ ರಾಮ್‌ನಿವಾಸ್ ಶರ್ಮಾ ಹೇಳಿದ್ದಾರೆ.
‘‘ನಲ್ವತ್ತು ನಿಮಿಷಗಳಲ್ಲಿ, ಬಾಲಕಿಯು ಕನಿಷ್ಠ ಮೂರು ಬಾರಿ ಶಿಕ್ಷಕರಿಗೆ ದೂರು ನೀಡಿದ್ದಾರೆ. ಆದರೆ ಅದನ್ನು ನಿರ್ಲಕ್ಷಿಸಲಾಗಿತ್ತು. ತನ್ನ ಸ್ಥಾನಕ್ಕೆ ಹೋಗುವಂತೆ ಬಾಲಕಿಗೆ ಶಿಕ್ಷಕರು ಸೂಚಿಸುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ’’ ಎಂದು ಅವರು ತಿಳಿಸಿದರು.
ಶೌಚಾಲಯಕ್ಕೆ ಹೋಗುವುದಾಗಿ ತಿಳಿಸಿ ತರಗತಿಯಿಂದ ಹೊರಗೆ ಹೋದ ಬಾಲಕಿಯು ಮೇಲಿನ ಮಹಡಿಗೆ ಹೋದಳು. ನಾಲ್ಕನೇ ಮಹಡಿಯ ಬಾಲ್ಕನಿಯ ತಡೆಗೋಡೆಯನ್ನು ಏರಿ ಕೆಳಗೆ ಹಾರಿದಳು ಎಂದು ಶರ್ಮಾ ಹೇಳಿದರು.







