Rajasthan | ಕಲೆಕ್ಟರ್ ಟೀನಾ ದಾಬಿ ಅವರನ್ನು 'ರೀಲ್ ಸ್ಟಾರ್' ಎಂದ ವಿದ್ಯಾರ್ಥಿಗಳ ಬಂಧನ; ಪೊಲೀಸ್ ಠಾಣೆಯ ಮುಂದೆ ಧರಣಿ

Photo Credit : indiatoday.in
ಬಾರ್ಮರ್ (ರಾಜಸ್ಥಾನ): ಕಾಲೇಜು ಶುಲ್ಕ ಏರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಯ ವೇಳೆ ಜಿಲ್ಲಾ ಕಲೆಕ್ಟರ್ ಟೀನಾ ದಾಬಿ ಅವರ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ, ಪ್ರತಿಭಟನೆಯ ನಂತರ ಇಬ್ಬರು ವಿದ್ಯಾರ್ಥಿ ನಾಯಕರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಆ ಬಳಿಕ ಕೊಟ್ವಾಲಿ ಪೊಲೀಸ್ ಠಾಣೆಯ ಎದುರು ವಿದ್ಯಾರ್ಥಿಗಳು ಧರಣಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಮುಲ್ತಾನ್ಮಲ್ ಭಿಖ್ಚಂದ್ ಛಾಜೆದ್ ಮಹಿಳಾ ಕಾಲೇಜಿನ ಹೊರಗೆ ಎಬಿವಿಪಿಯ ಇಬ್ಬರು ವಿದ್ಯಾರ್ಥಿ ನಾಯಕರ ಸಹಿತ ಕಾಲೇಜು ಶುಲ್ಕ ಹೆಚ್ಚಳ ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಪೊಲೀಸರು, ಇಬ್ಬರು ವಿದ್ಯಾರ್ಥಿ ನಾಯಕರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.
ಪ್ರತಿಭಟನೆಯ ವೇಳೆ ವಿದ್ಯಾರ್ಥಿ ನಾಯಕರೊಬ್ಬರು ಜಿಲ್ಲಾಧಿಕಾರಿಯನ್ನು ‘ರೀಲ್ ಸ್ಟಾರ್’ ಎಂದು ಉಲ್ಲೇಖಿಸಿದ್ದೇ ಬಂಧನಕ್ಕೆ ಕಾರಣ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಈ ಕ್ರಮಕ್ಕೆ ವಿರೋಧವಾಗಿ ಹಲವಾರು ಮಹಿಳಾ ವಿದ್ಯಾರ್ಥಿಗಳು ಠಾಣೆಗೆ ಮೆರವಣಿಗೆ ನಡೆಸಿ, ಬಂಧಿತರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಧರಣಿ ಆರಂಭಿಸಿದರು ಎಂದು ತಿಳಿದು ಬಂದಿದೆ.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿ ಹಿನಾ ಖತ್ರಿ, ಈ ಹೇಳಿಕೆಯನ್ನು ಅಪರಾಧವೆಂದು ಪರಿಗಣಿಸುವುದನ್ನು ಪ್ರಶ್ನಿಸಿದರು. ಸ್ವಚ್ಛತಾ ಅಭಿಯಾನಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜಿಲ್ಲಾಧಿಕಾರಿ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಉಲ್ಲೇಖ ಬಂದಿದ್ದು, ಕಾಲೇಜು ಸುತ್ತಮುತ್ತಲಿನ ನಾಗರಿಕ ಸಮಸ್ಯೆಗಳತ್ತ ಗಮನ ಸೆಳೆಯುವುದೇ ಉದ್ದೇಶವಾಗಿತ್ತು ಎಂದು ಅವರು ಹೇಳಿದರು.
ಪ್ರತಿಭಟನೆ ಶಾಂತಿಯುತವಾಗಿ ಮುಗಿದ ಬಳಿಕವೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು. ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯೇ ಇದ್ದಿದ್ದರೆ, ಪ್ರತಿಭಟನೆಯ ವೇಳೆಯಲ್ಲೇ ಕ್ರಮ ಕೈಗೊಳ್ಳಬೇಕಿತ್ತು ಎಂದು ಅವರು ಹೇಳಿದ್ದಾರೆ. ಬಂಧಿತ ನಾಯಕರನ್ನು ಬಿಡುಗಡೆ ಮಾಡುವವರೆಗೆ ಧರಣಿ ಮುಂದುವರಿಸುವುದಾಗಿ ವಿದ್ಯಾರ್ಥಿಗಳು ಎಚ್ಚರಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಟೀನಾ ದಾಬಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರೂಢಿ ಪ್ರಕ್ರಿಯೆಯಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದರು. ಆದರೆ, ಜಿಲ್ಲೆಯಲ್ಲಿ ಉದ್ವಿಗ್ನತೆಯನ್ನು ಶಮನಗೊಳಿಸುವ ಉದ್ದೇಶದಿಂದ ಯಾವುದೇ ಪ್ರಕರಣ ದಾಖಲಿಸದೆ ವಿದ್ಯಾರ್ಥಿ ನಾಯಕರನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.







