ತಪ್ಪದ ಸಂಕಷ್ಟಕ್ಕೆ ತೆಪ್ಪದ ಪರಿಹಾರ: ಪ್ರತಿದಿನ ವಿದ್ಯಾರ್ಥಿಗಳ ಜಲಯಾನ

Photo: TOI
ಛತ್ರಪತಿ ಸಂಭಾಜಿನಗರ: ಇಡೀ ದೇಶ ಚಂದ್ರಯಾನದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದರೆ, ಪ್ರಜಾಕ್ತಾ ಕಾಳೆ ಎಂಬ 11 ವರ್ಷದ ಪುಟ್ಟ ವಿದ್ಯಾರ್ಥಿನಿ ಹಾಗೂ ಆಕೆಯ 15 ಮಂದಿ ಶಾಲಾ ಸಹಪಾಠಿಗಳು ಶಾಲೆಗೆ ತೆರಳಲು ಮಹಾರಾಷ್ಟ್ರದ ಅತಿದೊಡ್ಡ ಜಲಾಶಯದಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ತೆಪ್ಪದ ಮೂಲಕ ಸಾಗುವ ಸಾಹಸಮಯ ಘಟನೆ ಬೆಳಕಿಗೆ ಬಂದಿದೆ.
ಔರಂಗಾಬಾದ್ ಜಿಲ್ಲೆಯ ಧನೋರಾ ಗ್ರಾಮದ ಪ್ರಜಾಕ್ತಾ ಹಾಗೂ ಇತರರು ದಪ್ಪ ಥರ್ಮೋಕೋಲ್ ನಲ್ಲಿ ಮಾಡಿದ ತೆಪ್ಪದಲ್ಲಿ ಹುಟ್ಟು ಹಾಕುತ್ತಾ ಪ್ರತಿ ದಿನ ಜಯಕವಾಡಿ ಜಲಾಶಯದ ಒಂದು ಕಿಲೋಮೀಟರ್ ಹಿನ್ನೀರು ಕ್ರಮಿಸಿ ಶಾಲೆ ತಲುಪುತ್ತಾರೆ. "ಜಲಯಾನದ ವೇಳೆ ತೆಪ್ಪಕ್ಕೆ ಬರುವ ನೀರು ಹಾವುಗಳನ್ನು ಓಡಿಸಲು ಬಿದಿರಿನ ದೊಣ್ಣೆ ಗಳನ್ನು ಜತೆಗೆ ಒಯ್ಯುತ್ತೇವೆ" ಎಂದು ಪ್ರಜಾಕ್ತಾ ಹೇಳುತ್ತಾರೆ.
ಈ ಜಲಾಶಯದ ಒಂದು ಭಾಗ ಅವರ ಗ್ರಾಮವನ್ನು ಎರಡು ಭಾಗವಾಗಿ ವಿಭಜಿಸುತ್ತದೆ. ಕಳೆದ 47 ವರ್ಷಗಳ ಹಿಂದೆ ಅಣೆಕಟ್ಟು ನಿರ್ಮಾಣವಾದಾಗಿನಿಂದ ಇದೇ ಪರಿಸ್ಥಿತಿ ಇದೆ.
"ನನ್ನ ಮಕ್ಕಳು ನನ್ನಂತೆ ಅನಕ್ಷರಸ್ಥರಾಗಿ ಇರುವುದು ಬೇಡ. ಆದ್ದರಿಂದ ಮಗಳು ಹಾಗೂ ಮಗ ಥರ್ಮೋಕೋಲ್ ಶೀಟ್ಗಳ ತೆಪ್ಪದಲ್ಲಿ ಶಾಲೆಗೆ ತೆರಳುತ್ತಿದ್ದಾರೆ. ನೀರಿನಲ್ಲಿ ವಿಷಕಾರಿ ಹಾವುಗಳು ಇರುವುದರಿಂದ ಪ್ರತಿದಿನದ ಅವರ ಪ್ರಯಾಣ ಭಯಾನಕ" ಎಂದು ಪ್ರಜಾಕ್ತಾಳ ತಂದೆ ವಿಷ್ಣು ಕಾಳೆ ಹೇಳುತ್ತಾರೆ.
"ನಾನು ಇತ್ತೀಚೆಗೆ ಈ ಶಾಲೆಗೆ ಬಂದಿದ್ದೇನೆ. ಆದರೆ ಹಲವು ವರ್ಷಗಳಿಂದ ಈ ಗ್ರಾಮದ ಮಕ್ಕಳು ಎಂಥದ್ದೇ ಪ್ರತಿಕೂಲ ಹವಾಮಾನದಲ್ಲೂ ಶಾಲೆಗೆ ಹಾಜರಾಗುತ್ತಾರೆ ಎಂದು ಮುಖ್ಯಶಿಕ್ಷಕ ರಾಜೇಂದ್ರ ಖೇಮರ್ ಹೇಳಿದ್ದಾರೆ.
ಛತ್ರಪತಿ ಸಂಭಾಜಿನಗರದಿಂದ 40 ಕಿಲೋಮೀಟರ್ ದೂರದ ಈ ಹಳ್ಳಿ ಔರಂಗಾಬಾದ್- ಪುಣೆ ಹೆದ್ದಾರಿಯಿಂದ ಕೇವಲ 5 ಕಿಲೋಮೀಟರ್ ಅಂತರದಲ್ಲಿದೆ. ಗ್ರಾಮದ ಮೂರು ಬದಿ ಜಯಕವಾಡಿ ಅಣೆಕಟ್ಟಿನ ಹಿನ್ನೀರು ಹಾಗೂ ಶಿವನಾ ನದಿಯಿಂದ ಸುತ್ತುವರಿಯಲ್ಪಟ್ಟಿದೆ. ಉಳಿದ ಭೂಭಾಗದಲಿ ಲಹೂಕಿ ನದಿ ಇದೆ. ಈ ನದಿಗೆ ಯಾವುದೇ ಸೇತುವೆ ಇಲ್ಲದೇ ಗ್ರಾಮಸ್ಥರಿಗೆ ಪರ್ಯಾಯ ಆಯ್ಕೆ ಇಲ್ಲ. ಈ ಹಿನ್ನೀರು ಕ್ರಮಿಸಬೇಕಾದ ಅನಿವಾರ್ಯತೆಯಿಂದ ತಪ್ಪಿಸಿಕೊಳ್ಳಬೇಕಾದರೆ ಜೌಗು ರಸ್ತೆಯಲ್ಲಿ ಸುಮಾರು 25 ಕಿಲೋಮೀಟರ್ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ.







