ಹೊಸದಿಲ್ಲಿ | ‘ರಾಷ್ಟ್ರನೀತಿ’ಯಡಿ ಆರೆಸ್ಸೆಸ್, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಶಾಲಾ ವಿದ್ಯಾರ್ಥಿಗಳಿಗೆ ಬೋಧನೆ

file photo (PTI)
ಹೊಸದಿಲ್ಲಿ,ಸೆ.30: ದಿಲ್ಲಿಯ ಸರಕಾರಿ ಶಾಲೆಗಳ ವಿದ್ಯಾರ್ಥಿಗಳು ನೂತನ ಶೈಕ್ಷಣಿಕ ಉಪಕ್ರಮ ‘ರಾಷ್ಟ್ರನೀತಿ’ಯ ಅಡಿ ಆರೆಸ್ಸೆಸ್ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಶೀಘ್ರವೇ ಕಲಿಯಲಿದ್ದಾರೆ ಎಂದು ಶಿಕ್ಷಣ ಸಚಿವ ಆಶಿಷ್ ಸೂದ್ ಅವರು ಮಂಗಳವಾರ ಪ್ರಕಟಿಸಿದರು.
ಆರೆಸ್ಸೆಸ್ ಅಧ್ಯಾಯದ ಸೇರ್ಪಡೆಯು ವಿದ್ಯಾರ್ಥಿಗಳಲ್ಲಿ ನಾಗರಿಕ ಜಾಗ್ರತಿ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವ ಜೊತೆಗೆ ದೇಶದ ಮೂಲಭೂತ ಕರ್ತವ್ಯಗಳಿಗೆ ಒತ್ತು ನೀಡುವ ಗುರಿಯನ್ನು ಹೊಂದಿದೆ. 1ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗಾಗಿ ರೂಪಿಸಲಾಗಿರುವ ಈ ಕಾರ್ಯಕ್ರಮವು ನೈತಿಕ ಆಡಳಿತ, ನಾಗರಿಕ ಪ್ರಜ್ಞೆ ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ಬೆಳೆಸಲು ಉದ್ದೇಶಿಸಿದೆ ಎಂದು ಅವರು ಹೇಳಿದರು.
ಪಠ್ಯಕ್ರಮವು ಆರೆಸ್ಸೆಸ್ನ ಇತಿಹಾಸ ಮತ್ತು ಮೂಲಗಳು, ಅದರ ಮಾರ್ಗದರ್ಶಕ ತತ್ವಗಳು, ಸಾಮಾಜಿಕ ಸೇವೆ ಮತ್ತು ರಕ್ತದಾನ ಅಭಿಯಾನಗಳು, ಆಹಾರ ವಿತರಣೆ, ಸಾಮಾಜಿಕ ಸೇವೆಗಳು ಮತ್ತು ವಿಪತ್ತು ಪರಿಹಾರಗಳು, ಕೇದಾರನಾಥ ಮತ್ತು ಬಿಹಾರ ನೆರೆಗಳಂತಹ ಘಟನೆಗಳಲ್ಲಿ ಮತ್ತು ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಅದರ ಪಾತ್ರವನ್ನು ಒಳಗೊಂಡಿದೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್ನ ಪಾತ್ರವನ್ನೂ ಅದು ಎತ್ತಿ ತೋರಿಸಿದೆ ಎಂದು ಸೂದ್ ತಿಳಿಸಿದರು.
ವಿದ್ಯಾರ್ಥಿಗಳು ಆರೆಸ್ಸೆಸ್ನೊಂದಿಗೆ ಗುರುತಿಸಿಕೊಂಡ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಹಾಲಿ ಪ್ರಧಾನಿ ನರೇಂದ್ರ ಮೋದಿಯವರಂತಹ ಪ್ರಮುಖ ನಾಯಕರ ಕೊಡುಗೆಗಳ ಬಗ್ಗೆ ಕಲಿಯಲಿದ್ದಾರೆ. ಪ್ರತ್ಯೇಕ ವಿಭಾಗವು ಸುಭಾಷಚಂದ್ರ ಬೋಸ್ ಮತ್ತು ಶ್ಯಾಮಪ್ರಸಾದ ಮುಖರ್ಜಿಯವರಂತಹ ನಾಯಕರನ್ನು ಕೇಂದ್ರೀಕರಿಸಿರುತ್ತದೆ ಎಂದರು.
‘ನಮೋ ವಿದ್ಯಾ ಉತ್ಸವ’ದಡಿ ಪರಿಚಯಿಸಲಾಗಿರುವ ಮೂರು ನೂತನ ಪಠ್ಯಕ್ರಮಗಳ ಭಾಗವಾಗಿ ರಾಷ್ಟ್ರನೀತಿ ಕಾರ್ಯಕ್ರಮಕ್ಕೆ ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಸೆ.18ರಂದು ಭಾರತ ಮಂಟಪಮ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದ್ದರು. ಈ ಉಪಕ್ರಮವು ವಿದ್ಯಾರ್ಥಿಗಳಿಗೆ ಆಡಳಿತ, ಪ್ರಜಾಪ್ರಭುತ್ವ ಮತ್ತು ಕ್ರಿಯಾಶೀಲ ಪೌರತ್ವದ ಬಗ್ಗೆ ಪ್ರಾಯೋಗಿಕ ಒಳನೋಟಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ.







