ಜಾರ್ಖಂಡ್ | ಭಾರೀ ಮಳೆಗೆ ವಸತಿ ಶಾಲೆಯಲ್ಲಿ ಸಿಲುಕಿದ್ದ 162 ವಿದ್ಯಾರ್ಥಿಗಳ ರಕ್ಷಣೆ

Photo | NDTV
ಜೆಮ್ಶೆಡ್ಪುರ: ಜಾರ್ಖಂಡ್ನ ಪೂರ್ವ ಸಿಂಗ್ಭೂಮ್ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಖಾಸಗಿ ವಸತಿ ಶಾಲೆಯೊಂದರಲ್ಲಿ ಸಿಲುಕಿದ್ದ 162 ವಿದ್ಯಾರ್ಥಿಗಳನ್ನು ರವಿವಾರ ಪೊಲೀಸರು ರಕ್ಷಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಭಾರೀ ಮಳೆಯಿಂದ ಪಂಡರಸೋಲಿಯಲ್ಲಿರುವ ಲವ್ ಕುಶ್ ವಸತಿ ಶಾಲೆಯ ಆವರಣದಲ್ಲಿ ನೀರು ತುಂಬಿಕೊಂಡಿತ್ತು. ಶಿಕ್ಷಕರು ಎಲ್ಲಾ ವಿದ್ಯಾರ್ಥಿಗಳನ್ನು ಮೇಲ್ಛಾವಣಿಗೆ ಸ್ಥಳಾಂತರಿಸಿದ್ದರು.
ಶನಿವಾರ ರಾತ್ರಿಯಿಂದ ವಿದ್ಯಾರ್ಥಿಗಳು ನೀರಿನಲ್ಲಿ ಸಿಲುಕಿಕೊಂಡಿದ್ದರು. ರವಿವಾರ ಪೊಲೀಸ್ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ತಂಡಗಳು ಸ್ಥಳಕ್ಕೆ ಧಾವಿಸಿ ಗ್ರಾಮಸ್ಥರ ಸಹಾಯದಿಂದ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ದೋಣಿಗಳನ್ನು ಬಳಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಿಷಭಾ ಗರ್ಗ್ ತಿಳಿಸಿದ್ದಾರೆ.
ʼಮಳೆಯಿಂದಾಗಿ ವಸತಿ ಶಾಲಾ ಕಟ್ಟಡ ಸಂಪೂರ್ಣವಾಗಿ ಮುಳುಗಿ ಹೋಗಿತ್ತು. ಇದೀಗ ಮಕ್ಕಳನ್ನು ರಕ್ಷಿಸಲಾಗಿದೆ. ಮುಂದಿನ ಸೂಚನೆವರೆಗೆ ಶಾಲೆಯನ್ನು ಬಂದ್ ಮಾಡಲಾಗುವುದುʼ ಎಂದು ಕೊವಾಲಿ ಠಾಣಾಧಿಕಾರಿ ಧನಂಜಯ್ ಪಾಸ್ವಾನ್ ತಿಳಿಸಿದ್ದಾರೆ.





