ಗುಜರಾತ್ನಲ್ಲಿ ಏರ್ ಇಂಡಿಯಾ ವಿಮಾನ ಪತನ: ಪ್ರಧಾನಿ ಮೋದಿ, ಅಮಿತ್ ಶಾ ರಾಜೀನಾಮೆಗೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಆಗ್ರಹ

ಸುಬ್ರಮಣಿಯನ್ ಸ್ವಾಮಿ (PTI)
ಹೊಸದಿಲ್ಲಿ: "1950ರಲ್ಲಿ ರೈಲು ಅಪಘಾತ ಸಂಭವಿಸಿದಾಗ, ಲಾಲ್ ಬಹದ್ದೂರ್ ಶಾಸ್ತ್ರಿ ರಾಜೀನಾಮೆ ನೀಡಿದ್ದರು. ಅದೇ ನೈತಿಕತೆಯ ಆಧಾರದಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ನಾಗರಿಕ ವಿಮಾನ ಯಾನ ಸಚಿವ ಕಂಜರಪು ಮನಮೋಹನ್ ನಾಯ್ಡು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವ ಮೂಲಕ, ಮುಕ್ತ ಹಾಗೂ ನ್ಯಾಯಸಮ್ಮತ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ನಾನು ಆಗ್ರಹಿಸುತ್ತೇನೆ" ಎಂದು ಇಂದು ಮಧ್ಯಾಹ್ನ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಒತ್ತಾಯಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, "ಇಲ್ಲಿಯವರೆಗೆ ಮೋದಿ ಹಾಗೂ ಅವರ ಸಹಚರರು ಮಾಡಿರುವುದು ಕೇವಲ ತಿರುಗಾಟ ಮಾತ್ರ. ಇದು ನಿಲ್ಲಬೇಕಿದೆ, ನಿಲ್ಲಬೇಕಿದೆ" ಎಂದೂ ಟೀಕಾ ಪ್ರಹಾರ ನಡೆಸಿದ್ದಾರೆ.
ಇಂದು ಮಧ್ಯಾಹ್ನ ಸುಮಾರು 1.30ರ ವೇಳೆಗೆ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್ನ ಗಾಟ್ವಿಕ್ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಟೇಕಾಫ್ ಆಗುತ್ತಿದ್ದಂತೆಯೇ ತಾಂತ್ರಿಕ ದೋಷದಿಂದಾಗಿ ಕೆಲವೇ ನಿಮಿಷಗಳಲ್ಲಿ ವಸತಿ ಪ್ರದೇಶವೊಂದರ ಮೇಲೆ ಪತನವಾಗಿತ್ತು. ಈ ವಿಮಾನದಲ್ಲಿ ಒಟ್ಟು 242 ಮಂದಿ ಪ್ರಯಾಣಿಕರಿದ್ದರು ಎಂದು ವರದಿಯಾಗಿದೆ.
ಈ ಅಪಘಾತದಲ್ಲಿ ಸಂಭವಿಸಿರುವ ಸಾವು-ನಾವುಗಳ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.
When a train derailed in 1950s, Lal Bahadur Shashtri resigned. On the same morality I demand PM Modi, HM Amit Shah and Civil Aviation Naidu resign so that a free& fair inquiry is held. All that Modi and associates have been doing so far is galavanting which must stop must stop.
— Subramanian Swamy (@Swamy39) June 12, 2025







