ಶಾಲೆಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸಬೇಕು: ಸುಧಾ ಮೂರ್ತಿ ಮನವಿ

Photo| PTI
ಹೊಸದಿಲ್ಲಿ: ಶಾಲಾ ಮಕ್ಕಳಲ್ಲಿ ದೇಶಭಕ್ತಿ ಬೆಳೆಸುವ ನಿಟ್ಟಿನಲ್ಲಿ ವಂದೇ ಮಾತರಂ ಹಾಡನ್ನು ಕಡ್ಡಾಯಗೊಳಿಸಬೇಕೆಂದು ರಾಜ್ಯಸಭೆ ಸಂಸದೆ ಸುಧಾ ಮೂರ್ತಿ ಸರಕಾರವನ್ನು ಒತ್ತಾಯಿಸಿದ್ದಾರೆ.
ಮಂಗಳವಾರ ವಂದೇ ಮಾತರಂ ರಚನೆಯ 150ನೇ ವರ್ಷಾಚರಣೆಯ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
“ನಾನು ಸಂಸದೆ ಎಂಬ ಹುದ್ದೆಯಲ್ಲಿ ಇಲ್ಲಿ ನಿಲ್ಲುತ್ತಿಲ್ಲ; ಭಾರತ ಮಾತೆಯ ಮಗಳಾಗಿ ನಿಂತಿದ್ದೇನೆ” ಎಂದು ಮಾತು ಪ್ರಾರಂಭಿಸಿದ ಸುಧಾ ಮೂರ್ತಿ, ವಂದೇ ಮಾತರಂನ ತಾತ್ವಿಕ ಅರ್ಥ, ಅದರ ಸಾಂಸ್ಕೃತಿಕ ಪರಿಣಾಮಗಳನ್ನು ಸದನಕ್ಕೆ ನೆನಪಿಸಿದರು.
ಭಾರತವನ್ನು ಒಂದು ಬಣ್ಣಬಣ್ಣದ ಹೊದಿಕೆಗೆ ಹೋಲಿಸಿದ ಅವರು, “ಪ್ರತಿಯೊಂದು ರಾಜ್ಯವೂ ಬಟ್ಟೆಯ ತುಂಡು; ಅವನ್ನು ದಾರದ ಸೂಜಿಯಿಂದ ಜೋಡಿಸುವ ಕೆಲಸ ವಂದೇ ಮಾತರಂ ಮಾಡುತ್ತದೆ” ಎಂದು ಹೇಳಿದರು.
“ತಾಯ್ನಾಡು ಎಂಬ ಪರಿಕಲ್ಪನೆ ನಕ್ಷೆ, ಧ್ವಜಗಳಿಗೆ ಸೀಮಿತವಲ್ಲ; ಇದು ಜೀವನ, ಭಾವನೆ, ಆಳವಾದ ನಿಷ್ಠೆಯ ಸಂಕೇತ” ಎಂದು ಅವರು ಅಭಿಪ್ರಾಯಪಟ್ಟರು.
ವಂದೇ ಮಾತರಂ ಕಲಿಸುವುದರ ಅಗತ್ಯತೆಯನ್ನು ಉಲ್ಲೇಖಿಸಿದ ಸುಧಾ ಮೂರ್ತಿ, “ಮಕ್ಕಳಿಗೆ ಜನಗಣಮನ ಕಲಿಸುತ್ತೇವೆ. ವಂದೇ ಮಾತರಂ ಕಲಿಸಲು ಹೆಚ್ಚುವರಿ ಮೂರು ನಿಮಿಷ ಸಾಕು. ಕಲಿಸದೇ ಹೋದರೆ ಮುಂದಿನ ಪೀಳಿಗೆ ಹಾಡಿನ ಸಂಪೂರ್ಣ ಪಠ್ಯವನ್ನೇ ಕಳೆದುಕೊಳ್ಳಬಹುದಾದ ಅಪಾಯ ಇದೆ” ಎಂದು ಕಳವಳ ವ್ಯಕ್ತಪಡಿಸಿದರು.
ಶಿಕ್ಷಣ ಸಚಿವಾಲಯವನ್ನು ಉದ್ದೇಶಿಸಿ ಅವರು,“ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸಬೇಕು. ದೇಶಭಕ್ತಿ ಎಂದರೆ ಸಹಾನುಭೂತಿ, ತ್ಯಾಗ, ತಾಯ್ನಾಡಿನ ರಕ್ಷಣೆಯ ಮೌಲ್ಯಗಳು—ಇವೆಲ್ಲವೂ ವಂದೇ ಮಾತರಂ ರೂಪಿಸಿರುವ ಸಂದೇಶಗಳಲ್ಲಿ ಅಡಕವಾಗಿವೆ” ಎಂದು ಹೇಳಿದರು.







