ಉತ್ತರ ಪ್ರದೇಶ | ಶರೀರದ ಮೇಲೆಯೇ ಡೆತ್ ನೋಟ್ ಬರೆದುಕೊಂಡು ಮಹಿಳೆಯ ಆತ್ಮಹತ್ಯೆ

ಹೊಸದಿಲ್ಲಿ,ಜು.18: ಪತಿಯ ಮನೆಯಲ್ಲಿ ವರದಕ್ಷಿಣೆ ಕಿರುಕುಳವನ್ನು ಎದುರಿಸುತ್ತಿದ್ದ ಮಹಿಳೆಯೋರ್ವಳು ತನ್ನ ಶರೀರದ ಮೇಲೆ ಆತ್ಮಹತ್ಯಾ ಪತ್ರವನ್ನು ಬರೆದುಕೊಂಡು ವಿಷ ಸೇವಿಸಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬಾಗಪತ್ನಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು,ಮನೀಷಾ(28) ಆತ್ಮಹತ್ಯೆಗೆ ಶರಣಾಗಿರುವ ಮಹಿಳೆಯಾಗಿದ್ದಾಳೆ.
ಪೆನ್ನಿನಿಂದ ತನ್ನ ತೋಳು, ಕಾಲುಗಳು ಮತ್ತು ಹೊಟ್ಟೆಯ ಮೇಲೆ ಬರೆದುಕೊಂಡಿರುವ ಟಿಪ್ಪಣಿಯಲ್ಲಿ ಆಕೆ ತನ್ನ ಪತಿ ಕುಂದನ್ ಮತ್ತು ಆತನ ಕುಟುಂಬದ ಕಿರುಕುಳದಿಂದ ತಾನು ಅನುಭವಿಸಿದ್ದ ನೋವನ್ನು ತೋಡಿಕೊಂಡಿದ್ದಾಳೆ. ತನ್ನ ಸಾವಿಗೆ ಕುಂದನ್ ಮತ್ತು ಆತನ ಕುಟುಂಬವೇ ಕಾರಣ ಎಂದು ಆಕೆ ಹೇಳಿದ್ದಾಳೆ.
ತನ್ನ ಸಾವಿಗೆ ಅತ್ತೆ-ಮಾವನನ್ನು ದೂಷಿಸಿ ವೀಡಿಯೊವೊಂದನ್ನೂ ಮನೀಷಾ ಮಾಡಿದ್ದಾಳೆ. ಪೋಲಿಸರಿಗೆ ಲಭ್ಯವಾಗಿರುವ ವೀಡಿಯೊ ತುಣುಕು,ಮನೀಷಾ ಅಳುತ್ತಲೇ ತನ್ನ ಗಂಡ,ಆತನ ತಂದೆ ಮತ್ತು ತಾಯಿ ಹಾಗೂ ಸೋದರ ವರದಕ್ಷಿಣೆಗಾಗಿ ಹೇಗೆ ತನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎನ್ನುವುದನ್ನು ವಿವರಿಸಿದ್ದಾಳೆ. ಮನೀಷಾ ತಿಳಿಸಿರುವಂತೆ ಆಕೆಯ ಕುಟುಂಬವು ಮದುವೆಗಾಗಿ 20 ಲಕ್ಷ ರೂ.ಗಳನ್ನು ವೆಚ್ಚ ಮಾಡಿದ್ದರೂ ವರದಕ್ಷಿಣೆಯಾಗಿ ಈಗಾಗಲೇ ಬುಲೆಟ್ ಬೈಕ್ ನೀಡಿದ್ದರೂ ತವರಿನಿಂದ ಕಾರು ಮತ್ತು ದೊಡ್ಡ ಮೊತ್ತದ ಹಣವನ್ನು ತರುವಂತೆ ಅವರು ಆಕೆಗೆ ಪದೇ ಪದೇ ಕಿರುಕುಳ ನೀಡುತ್ತಿದ್ದರು.
ತನ್ನ ಅತ್ತೆ-ಮಾವ ತನಗೆ ಆಗಾಗ್ಗೆ ಥಳಿಸುತ್ತಿದ್ದರು ಮತ್ತು ಗರ್ಭಪಾತ ಮಾಡಿಕೊಳ್ಳುವಂತೆ ಬಲವಂತಗೊಳಿಸಿದ್ದರು ಎಂದೂ ಮನೀಷಾ ಆರೋಪಿಸಿದ್ದಾಳೆ.
ವರದಕ್ಷಿಣೆ ಬೇಡಿಕೆಗೆ ತಾನು ಮಣಿಯದಿದ್ದಾಗ ಅತ್ತೆ-ಮಾವ ತನಗೆ ವಿದ್ಯುತ್ ಆಘಾತ ನೀಡಿ ಕೊಲ್ಲಲು ಪ್ರಯತ್ನಿಸಿದ್ದರು ಎಂದು ಮನೀಷಾ ಪತ್ರದಲ್ಲಿ ಹೇಳಿದ್ದಾಳೆ.
ಮನೀಷಾ 2023ರಲ್ಲಿ ನೊಯ್ಡಾ ನಿವಾಸಿ ಕುಂದನ್ ನನ್ನು ಮದುವೆಯಾಗಿದ್ದಳು. ಕೆಲವೇ ತಿಂಗಳುಗಳಲ್ಲಿ ಅತ್ತೆ-ಮಾವ ವರದಕ್ಷಿಣೆಗಾಗಿ ಒತ್ತಾಯಿಸಲು ಆರಂಭಿಸಿದ್ದರು.
ಮಾನಸಿಕ ಹಿಂಸೆ ಹೆಚ್ಚಾದಾಗ ಮನೀಷಾ ಜುಲೈ 2024ರಲ್ಲಿ ತನ್ನ ತವರುಮನೆಗೆ ಮರಳಿದ್ದಳು. ಸಾವಿಗೆ ನಾಲ್ಕು ದಿನಗಳ ಮೊದಲು ಮನೀಷಾಳ ಕುಟುಂಬವು ಆಕೆಗೆ ಪತಿಯಿಂದ ವಿಚ್ಛೇದನ ಕೊಡಿಸುವ ಬಗ್ಗೆ ಚರ್ಚೆ ಆರಂಭಿಸಿತ್ತು. ಆದರೆ ತನ್ನ ಪತಿಯ ಮನೆಯವರು ವರದಕ್ಷಿಣೆಯಾಗಿ ಪಡೆದಿದ್ದ ವಸ್ತುಗಳನ್ನು ಮರಳಿಸುವವರೆಗೂ ತಾನು ವಿಚ್ಛೇದನ ಕಾಗದಪತ್ರಗಳಿಗೆ ಸಹಿ ಹಾಕುವುದಿಲ್ಲ ಎಂದು ಮನೀಷಾ ಸ್ಪಷ್ಟ ಪಡಿಸಿದ್ದಳು ಎಂದು ಪೋಲಿಸ್ ಅಧಿಕಾರಿಗಳು ತಿಳಿಸಿದರು.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.







