ಕೇರಳ: 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಪಾಲಕ್ಕಾಡ್, ಅ. 16: ಇಲ್ಲಿನ ಕನ್ನಾಡಿ ಹೈಯರ್ ಸೆಕೆಂಡರಿ ಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿಯ ಆತ್ಮಹತ್ಯೆಗೆ ಸಂಬಂಧಿಸಿ ಅದ್ಯಾಪಕರೋರ್ವರ ವಿರುದ್ಧ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.
ಇಲ್ಲಿಗೆ ಸಮೀಪದ ಪಳ್ಳಂಚತ್ತನೂರ್‌ನ ಜಯಕೃಷ್ಣನ್ ಅವರ ಪುತ್ರ ಅರ್ಜುನ್ (14)ನ ಮೃತದೇಹ ಮನೆಯ ಮಲಗುವ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮಂಗಳವಾರ ಸಂಜೆ ಸುಮಾರು 4.30ಕ್ಕೆ ಪತ್ತೆಯಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೆತ್ತವರು ದಾಖಲಿಸಿದ ದೂರಿನ ಆಧಾರದಲ್ಲಿ ಕಝಲ್ ಮನ್ನಂ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿದ್ದಾರೆ.
ಅರ್ಜುನ್ ಇನ್‌ಸ್ಟಾಗ್ರಾಂನಲ್ಲಿ ಕಳುಹಿಸಿದ ನಿರ್ದಿಷ್ಟ ಸಂದೇಶದ ಕುರಿತಂತೆ ತಾಯಿ ಪ್ರಶ್ನಿಸಿದ್ದರು ಹಾಗೂ ಆತನನ್ನು ಇನ್ನೊಂದು ಶಾಲೆಗೆ ವರ್ಗಾಯಿಸುವ ಸಾಧ್ಯತೆಯನ್ನು ಉಲ್ಲೇಖಿಸಿದ್ದರು. ಇದರಿಂದ ಖಿನ್ನನಾದ ಅರ್ಜುನ್ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ಅರ್ಜುನ್ ಕೃತ್ಯಗಳು ಸೈಬರ್ ಪ್ರಕರಣ ದಾಖಲಾಗಲು ಹಾಗೂ ಬಂಧನಕ್ಕೆ ಕಾರಣವಾಗಬಹುದು ಎಂದು ಅಧ್ಯಾಪಕರು ಆತನಿಗೆ ತಿಳಿಸಿದ್ದರು ಎಂದು ಇತರ ವಿದ್ಯಾರ್ಥಿಗಳಿಂದ ನಮಗೆ ಅನಂತರ ತಿಳಿಯಿತು ಎಂದು ಅರ್ಜುನ್ ನ ಸಂಬಂಧಿಕರೊಬ್ಬರು ಹೇಳಿದ್ದಾರೆ.
ಶಾಲೆಯ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೇರಳ ಸ್ಟೂಡೆಂಟ್ಸ್ ಯೂನಿಯನ್ (ಕೆಎಸ್‌ಯು), ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸೇರಿದಂತೆ ವಿವಿಧ ರಾಜಕೀಯ ಸಂಘಟನೆಗಳು ಪಾಲ್ಗೊಂಡವು.
ಅರ್ಜುನ್‌ಗೆ ಛೀಮಾರಿ ಹಾಕಿದ ಅಧ್ಯಾಪಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಿರತ ವಿದ್ಯಾರ್ಥಿಗಳು ಮುಖ್ಯೋಪಾಧ್ಯಾಯಿನಿ ಕಚೇರಿಯಿಂದ ಹೊರಗೆ ಹೋಗದಂತೆ ತಡೆ ಒಡ್ಡಿದರು.
‘‘ಇತರ ಮಕ್ಕಳಿಗೆ ಅರ್ಜುನ್ ಸಂದೇಶ ಕಳುಹಿಸುತ್ತಿರುವುದನ್ನು ಆತನ ಹೆತ್ತವರು ಪತ್ತೆ ಮಾಡಿದ್ದರು. ಸಾಮಾಜಿಕ ಮಾಧ್ಯಮವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ಅರ್ಜುನ್ ಸೇರಿದಂತೆ ವಿದ್ಯಾರ್ಥಿಗಳ ಗುಂಪಿಗೆ ಅಧ್ಯಾಪಕರು ಎಚ್ಚರಿಕೆ ನೀಡಿದ್ದರು’’ ಎಂದು ಮುಖ್ಯೋಪಾಧ್ಯಾಯಿನಿ ತಿಳಿಸಿದ್ದಾರೆ.







