ದಿಲ್ಲಿ | ಶಿಕ್ಷಕರ ಕಿರುಕುಳದಿಂದ ನೊಂದು ಮೆಟ್ರೋ ನಿಲ್ದಾಣದಲ್ಲಿ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ | Photo Credit : freepik.com
ಹೊಸದಿಲ್ಲಿ,ನ.20: ಶಿಕ್ಷಕರ ಕಿರುಕುಳದಿಂದ ನೊಂದು ಇಲ್ಲಿನ ಮೆಟ್ರೋ ನಿಲ್ದಾಣವೊಂದರಲ್ಲಿ 10ನೇ ತರಗತಿಯ ವಿದ್ಯಾರ್ಥಿಯೊಬ್ಬ ಪ್ಲ್ಯಾಟ್ಫಾರಂನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯಿಂದ ಆಕ್ರೋಶಗೊಂಡ ನೂರಾರು ಜನರು, ಬಾಲಕ ಕಲಿಯುತ್ತಿದ್ದ ಶಾಲೆಯ ಹೊರಗೆ ಗುರುವಾರ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗೆ ಕಿರುಕುಳ ನೀಡಿದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.
16 ವರ್ಷದ ಬಾಲಕ, ನವೆಂಬರ್ 18ರಂದು ರಾಜೇಂದ್ರ ಪ್ಯಾಲೇಸ್ ಮೆಟ್ರೋ ನಿಲ್ದಾಣದಲ್ಲಿ ಪ್ಲ್ಯಾಟ್ಫಾರ್ಮ್ಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಸ್ಕೂಲ್ ಬ್ಯಾಗ್ ನಲ್ಲಿ ಡೆತ್ನೋಟ್ ಪತ್ತೆಯಾಗಿದ್ದು,ತಾನು ಶಾಲೆಯಲ್ಲಿ ಶಿಕ್ಷಕರ ಕಿರುಕುಳದಿಂದ ನೊಂದು ಸಾವಿಗೆ ಶರಣಾಗಿರುವುದಾಗಿ ಬರೆದಿದ್ದನು.
‘‘ ಹೀಗೆ ಮಾಡಿದ್ದಕ್ಕೆ ವಿಷಾದವಿದೆ. ಆದರೆ ಶಾಲಾ ಸಿಬ್ಬಂದಿ ಆಡಿದಂತಹ ಮಾತುಗಳಿಗೆ ನಾನು ಹೀಗೆ ಮಾಡಬೇಕಾಗಿ ಬಂತು’’ ಎಂದು ಆತ ಡೆತ್ನೋಟ್ನಲ್ಲಿ ಬರೆದಿದ್ದಾನೆ.
ಒಂದು ವೇಳೆ ತನ್ನ ದೇಹದಭಾಗಗಳು ಸುಸ್ಥಿತಿಯಲ್ಲಿದ್ದರೆ, ಅವುಗಳನ್ನು ನಿಜಕ್ಕೂ ಅಗತ್ಯವಿರುವವರಿಗೆ ದಾನ ಮಾಡುವಂತೆಯೂ ಆತ ತಿಳಿಸಿದ್ದಾನೆ.‘‘ನನ್ನ ಹೆತ್ತವರು ನನಗೆ ಎಲ್ಲವನ್ನೂ ಕೊಟ್ಟಿದ್ದಾರೆ. ಆದರೆ ಅವರಿಗಾಗಿ ನನಗೆ ಏನನ್ನೂ ಕೊಡಲು ಸಾಧ್ಯವಾಗಲಿಲ್ಲ. ನನ್ನನ್ನು ಕ್ಷಮಿಸಿ’’ ಎಂದು ಆತ ತನ್ನ ಪಾಲಕರು ಹಾಗೂ ಸೋದರನಲ್ಲಿ ಕ್ಷಮೆಕೋರಿದ್ದಾನೆ.
ತನ್ನ ಈ ಪರಿಸ್ಥಿತಿಗೆ ಕಾರಣರಾದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದರಿಂದಾಗಿ ಬೇರೆ ಯಾವುದೇ ವಿದ್ಯಾರ್ಥಿಗೆ ನನ್ನ ಪರಿಸ್ಥಿತಿ ಬಾರಕೂಡದು ಎಂದು ಆತ ಡೆತ್ನೋಟ್ನಲ್ಲಿ ಹೇಳಿದ್ದಾನೆ.
ಬಾಲಕನ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಸಲ್ಲಿಸಿದ್ದು, ಶಿಕ್ಷಕರ ನಿರಂತರ ಕಿರುಕುಳದಿಂದಾಗಿ ತನ್ನ ಪುತ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಎಂದು ಆರೋಪಿಸಿದ್ದಾರೆ.
ಕೆಲವು ನಿರ್ದಿಷ್ಟ ಶಿಕ್ಷಕರು ಸಣ್ಣಪುಟ್ಟ ವಿಚಾರಗಳಿಗಾಗಿ ನಿಂದಿಸುತ್ತಿದ್ದರು, ಅಪಮಾನಿಸುತ್ತಿದ್ದರು ಹಾಗೂ ಮಾನಸಿಕ ಚಿತ್ರಹಿಂಸೆ ನೀಡುತ್ತಿದ್ದರು ಎಂದು ತನ್ನ ಪುತ್ರನು ತನ್ನಲ್ಲಿ ಪದೇ ಪದೇ ದೂರಿದ್ದನು ಎಂದು ಮೃತನ ತಂದೆ ಆರೋಪಿಸಿದ್ದಾರೆ.
ಶಾಲಾಡಳಿತಕ್ಕೆ ಈ ಬಗ್ಗೆ ಹಲವಾರು ಸಲ ಮೌಖಿಕವಾಗಿ ದೂರುಗಳನ್ನು ನೀಡಿದ್ದರೂ, ಶಿಕ್ಷಕರು ಅದೇ ವರ್ತನೆಯನ್ನು ಮುಂದುವರಿಸಿದ್ದರೆಂದು ಎಫ್ಐಆರ್ ನಲ್ಲಿ ಆರೋಪಿಸಲಾಗಿದೆ.
ಡೆತ್ನೋಟ್ನಲ್ಲಿ ಬಾಲಕನ ಹೇಳಿಕೆ ಹಾಗೂ ಎಫ್ಐಆರ್ ನಲ್ಲಿ ದಾಖಲಿಸಲಾದ ಆರೋಪಗಳನ್ನು ಪರಿಶೀಲಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿರುವುದಾಗಿ ಅವರು ಹೇಳಿದ್ದಾರೆ.







