ಇಸ್ಲಾಮಿನಲ್ಲಿ ಆತ್ಮಹತ್ಯೆ ಹರಾಮ್, ಅಮಾಯಕರ ಹತ್ಯೆ ಘೋರ ಪಾಪ: ಸಂಸದ ಉವೈಸಿ

Photo I indiatoday
ಹೊಸದಿಲ್ಲಿ,ನ.19: ಎಐಎಂಐಎಂ ವರಿಷ್ಠ ಅಸದುದ್ದೀನ್ ಉವೈಸಿಯವರು ದಿಲ್ಲಿ ಕಾರ್ ಬಾಂಬ್ ಸ್ಫೋಟದ ಆತ್ಮಹತ್ಯಾ ಬಾಂಬರ್ ಉಮರ್ ನಬಿಯ ವ್ಯಾಪಕವಾಗಿ ಶೇರ್ ಆಗಿರುವ ವೀಡಿಯೊಕ್ಕೆ ಬುಧವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ವೀಡಿಯೊ ಕ್ಲಿಪ್ ಖಂಡಿಸಿರುವ ಅವರು,ಇಸ್ಲಾಮ್ ನಲ್ಲಿ ಆತ್ಮಹತ್ಯೆ ಹರಾಮ್(ನಿಷಿದ್ಧ) ಆಗಿದೆ ಮತ್ತು ಅಮಾಯಕರ ಹತ್ಯೆಗಳು ಘೋರ ಪಾಪ ಎಂದು ಹೇಳಿದ್ದಾರೆ.
ದಿಲ್ಲಿ ಸ್ಫೋಟ ಆರೋಪಿ ಉಮರ್ ನಬಿ ಆತ್ಮಹತ್ಯಾ ಬಾಂಬ್ ದಾಳಿಯನ್ನು ‘ಹುತಾತ್ಮತೆ’ ಎಂದು ಸಮರ್ಥಿಸಿಕೊಂಡಿರುವ ದಿನಾಂಕವಿಲ್ಲದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ ಮತ್ತು ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಎಕ್ಸ್ ಪೋಸ್ಟ್ ನಲ್ಲಿ ಬರೆದಿರುವ ಉವೈಸಿ, ಇಸ್ಲಾಮಿನಲ್ಲಿ ಆತ್ಮಹತ್ಯೆ ನಿಷಿದ್ಧವಾಗಿದೆ ಮತ್ತು ಅಮಾಯಕರ ಹತ್ಯೆಗಳು ಘೋರ ಪಾಪ. ಇಂತಹ ಕೃತ್ಯಗಳು ಈ ನೆಲದ ಕಾನೂನಿಗೂ ವಿರುದ್ಧವಾಗಿವೆ. ಅವುಗಳನ್ನು ಯಾವುದೇ ರೀತಿಯಲ್ಲಿ ತಪ್ಪಾಗಿ ಅರ್ಥೈಸಬಾರದು. ಅದು ಭಯೋತ್ಪಾದನೆಯಲ್ಲದೆ ಬೇರೇನೂ ಅಲ್ಲ ಎಂದು ಹೇಳಿದ್ದಾರೆ.
ಸ್ಫೋಟ ಕುರಿತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ವಿರುದ್ಧ ದಾಳಿ ನಡೆಸಿರುವ ಉವೈಸಿ, ಇಂತಹ ದಾಳಿಯ ಸುಳಿವನ್ನು ಪತ್ತೆ ಹಚ್ಚಲು ಹೇಗೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಸಿಂಧೂರ ಮತ್ತು ಮಹಾದೇವ ಕಾರ್ಯಾಚರಣೆಗಳ ಸಂದರ್ಭದಲ್ಲಿ ಶಾ ಅವರು ಕಳೆದ ಆರು ತಿಂಗಳುಗಳಲ್ಲಿ ಯಾವುದೇ ಸ್ಥಳೀಯ ವ್ಯಕ್ತಿ ಭಯೋತ್ಪಾದಕ ಗುಂಪುಗಳಿಗೆ ಸೇರಿಲ್ಲ ಎಂದು ಸಂಸತ್ತಿನಲ್ಲಿ ಭರವಸೆ ನೀಡಿದ್ದರು. ಹಾಗಾದರೆ ಈ ಗುಂಪು ಎಲ್ಲಿಂದ ಬಂದಿತ್ತು? ಈ ಗುಂಪನ್ನು ಪತ್ತೆ ಹಚ್ಚುವಲ್ಲಿ ವೈಫಲ್ಯಕ್ಕೆ ಹೊಣೆಗಾರರು ಯಾರು ಎಂದೂ ಅವರು ಪ್ರಶ್ನಿಸಿದ್ದಾರೆ.
ಇತ್ತೀಚಿಗೆ ಸಾಮಾಜಿಕ ಮಾಧ್ಯಮದಲ್ಲಿ ಬೆಳಕಿಗೆ ಬಂದಿರುವ ವೀಡಿಯೊವನ್ನು ಪೋಲಿಸರು ನಬಿಯ ಸೋದರನ ಫೋನ್ ನಿಂದ ವಶಪಡಿಸಿಕೊಂಡಿದ್ದು, ಸ್ಫೋಟಕ್ಕೆ ಕೆಲವೇ ದಿನಗಳ ಮುನ್ನ ರೆಕಾರ್ಡ್ ಮಾಡಲಾಗಿತ್ತು ಎಂದು ಹೇಳಲಾಗಿದೆ.
ವೀಡಿಯೊದಲ್ಲಿ ಇಂಗ್ಲಿಷ್ ನಲ್ಲಿ ಮಾತನಾಡಿರುವ ನಬಿ, 'ಫಿದಾಯೀನ್’ ದಾಳಿಯನ್ನು ‘ಹುತಾತ್ಮತೆ’ ಕೃತ್ಯವೆಂದು ಬಣ್ಣಿಸಿದ್ದಾನೆ. ವೀಡಿಯೊವನ್ನು ಅಧ್ಯಯನ ಮಾಡುತ್ತಿರುವ ಮನಃಶಾಸ್ತ್ರಜ್ಞರು ಅದು ನಬಿಯ ಆಳವಾಗಿ ಬೇರೂರಿದ್ದ ಜಿಹಾದಿ ಮನಸ್ಥಿತಿಯನ್ನು ಬಹಿರಂಗಗೊಳಿಸಿದೆ ಮತ್ತು ಆತ ‘ಆತ್ಮಹತ್ಯಾ ದಾಳಿ’ಗೆ ಸಜ್ಜಾಗಿದ್ದ ಎನ್ನುವುದನ್ನು ತೋರಿಸಿದೆ ಎಂದು ಹೇಳಿದ್ದಾರೆ.







