ಕಾಂಗ್ರೆಸ್ ಸಂಸದ ಧೀರಜ್ ಸಾಹುಗೆ ಈಡಿ ಸಮನ್ಸ್
ಹಣ ಅಕ್ರಮ ವರ್ಗಾವಣೆ ಪ್ರಕರಣ

ಧೀರಜ್ ಸಾಹು | Photo: PTI
ರಾಯಗಢ: ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ವಿರುದ್ಧದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿ ಕಾಂಗ್ರೆಸ್ನ ರಾಜ್ಯ ಸಭಾ ಸದಸ್ಯ ಧೀರಜ್ ಪ್ರಸಾದ್ ಶಾಹು ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.
ಒಡಿಶಾ ಮೂಲದ ಬೌದ್ಧ ಡಿಸ್ಟಿಲ್ಲರಿ ಪ್ರೈವೇಟ್ ಲಿಮಿಟೆಡ್ (ಬಿಡಿಪಿಎಲ್) ಮೇಲೆ ಆದಾಯ ತೆರಿಗೆ ಇಲಾಖೆ ಡಿಸೆಂಬರ್ನಲ್ಲಿ ದಾಳಿ ನಡೆಸಿದ ಸಂದರ್ಭ 351.8 ಕೋ.ರೂ. ಪತ್ತೆಯಾದ ಬಳಿಕ ಧೀರಜ್ ಪ್ರಸಾದ್ ಸಾಹು (64) ಅವರು ಸುದ್ದಿಯಲ್ಲಿದ್ದರು.
ಜಾರ್ಖಂಡ್ ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರೊಂದಿಗೆ ನಂಟು ಹಾಗೂ ದಿಲ್ಲಿಯಲ್ಲಿರುವ ಅವರ ನಿವಾಸದಿಂದ ಜನವರಿ 29ರಂದು ವಶಪಡಿಸಿಕೊಳ್ಳಲಾದ ಬಿಎಂಡಬ್ಲ್ಯು ಎಸ್ಯುವಿ ಕಾರಿನ ಕುರಿತಂತೆ ಧೀರಜ್ ಪ್ರಸಾದ್ ಸಾಹು ಅವರನ್ನು ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯ ಬಯಸಿದೆ.
ಜಾರಿ ನಿರ್ದೇಶನಾಲಯ ಹರ್ಯಾಣ ನಂಬರ್ ಪ್ಲೇಟ್ ಹೊಂದಿರುವ ಬಿಎಂಡಬ್ಲ್ಯು ಎಸ್ಯುವಿ ಕಾರು ನೋಂದಣಿಯಾದ ವಿಳಾಸಕ್ಕೆ ಸಂಬಂಧಿಸಿ ಗುರುಗ್ರಾಮದಲ್ಲಿರುವ ಸ್ಥಳದಲ್ಲಿ ಬುಧವಾರ ಬೆಳಗ್ಗೆ ಶೋಧ ಕಾರ್ಯಾಚರಣೆ ನಡೆಸಿದೆ. ಅಲ್ಲದೆ, ಇದೇ ಪ್ರಕರಣದ ತನಿಖೆಯ ಭಾಗವಾಗಿ ಕೋಲ್ಕತ್ತಾದ ಇನ್ನೆರೆಡು ಸ್ಥಳಗಳಲ್ಲಿ ದಾಳಿ ನಡೆಸಿದೆ.





