Maharashtra | ಮೊದಲ ಮಹಿಳಾ DCM ಆಗಿ ಸುನೇತ್ರಾ ಪವಾರ್ ಜ.31ರಂದು ಪ್ರಮಾಣ ವಚನ ಸಾಧ್ಯತೆ: ವರದಿ

PC | PTI
ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ನಿಧನದ ಎರಡು ದಿನಗಳ ಬಳಿಕ, ಅವರ ಪತ್ನಿ ಹಾಗೂ ಎನ್ಸಿಪಿ ರಾಜ್ಯಸಭಾ ಸಂಸದೆ ಸುನೇತ್ರಾ ಪವಾರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇದರಿಂದ ಮಹಾರಾಷ್ಟ್ರಕ್ಕೆ ಮೊದಲ ಮಹಿಳಾ ಉಪಮುಖ್ಯಮಂತ್ರಿ ದೊರಕುವ ಸಾಧ್ಯತೆ ಇದೆ ಎಂದು hindustantimes.com ವರದಿ ಮಾಡಿದೆ.
ಶನಿವಾರ ಎನ್ಸಿಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಸುನೇತ್ರಾ ಪವಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡುವ ನಿರೀಕ್ಷೆಯಿದೆ. ಸಭೆಯ ನಂತರ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ನಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಮಹಾರಾಷ್ಟ್ರದ ಸಚಿವರೊಬ್ಬರು, “ಶನಿವಾರ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಹಲವಾರು ನಾಯಕರು ಸುನೇತ್ರಾ ಪವಾರ್ ಅವರು ಉಪಮುಖ್ಯಮಂತ್ರಿಯಾಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂತಿಮ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಗುತ್ತದೆ,” ಎಂದರು.
ಮೂಲಗಳ ಪ್ರಕಾರ, ಸುನೇತ್ರಾ ಪವಾರ್ ಅವರಿಗೆ ಅಬಕಾರಿ ಹಾಗೂ ಕ್ರೀಡಾ ಖಾತೆಗಳನ್ನು ನೀಡುವ ಸಾಧ್ಯತೆ ಇದ್ದು, ಹಣಕಾಸು ಖಾತೆಯನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೇ ವಹಿಸಿಕೊಳ್ಳಲಿದ್ದಾರೆ.
ಪ್ರಸ್ತುತ ಸುನೇತ್ರಾ ಪವಾರ್ ಅವರು ರಾಜ್ಯಸಭಾ ಸದಸ್ಯೆಯಾಗಿದ್ದು, ಮಹಾರಾಷ್ಟ್ರ ವಿಧಾನಸಭೆಯ ಯಾವುದೇ ಸದನದ ಸದಸ್ಯರಾಗಿಲ್ಲ. ಅಜಿತ್ ಪವಾರ್ ಅವರ ನಿಧನದಿಂದಾಗಿ ಅವರ ವಿಧಾನಸಭಾ ಕ್ಷೇತ್ರ ಖಾಲಿಯಾಗಿದ್ದು, ಮುಂದಿನ ದಿನಗಳಲ್ಲಿ ಉಪಚುನಾವಣೆ ನಡೆಯುವ ಸಾಧ್ಯತೆ ಇದೆ. ಇದೇ ವೇಳೆ, ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಶನಿವಾರ ನಡೆದರೂ ಯಾವುದೇ ಅಡಚಣೆ ಇಲ್ಲ ಎಂದು ಮುಖ್ಯಮಂತ್ರಿ ಫಡ್ನವೀಸ್ ಅವರು ತಿಳಿಸಿದ್ದಾರೆ ಎಂಬುದಾಗಿ ಮೂಲಗಳು ಹೇಳಿವೆ.







