ಹಾವು ಕಡಿತಕ್ಕೆ ಚಿಕಿತ್ಸೆ: ರಾಜ್ಯಗಳೊಂದಿಗೆ ಮಾತುಕತೆಗೆ ಕೇಂದ್ರಕ್ಕೆ ಸುಪ್ರೀಂ ಸೂಚನೆ

ಸಾಂದರ್ಭಿಕ ಚಿತ್ರ | freepik.com
ಹೊಸದಿಲ್ಲಿ: ದೇಶಾದ್ಯಂತ ಹಾವು ಕಡಿತ ಸಮಸ್ಯೆಯನ್ನು ಪರಿಹರಿಸಲು ರಾಜ್ಯ ಸರಕಾರಗಳೊಂದಿಗೆ ಮಾತುಕತೆ ನಡೆಸುವಂತೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಕೇಂದ್ರಕ್ಕೆ ಸೂಚಿಸಿದೆ.
ಹಾವು ಕಡಿತಕ್ಕೆ ಚಿಕಿತ್ಸೆ ನೀಡಲು ಪ್ರತಿವಿಷಗಳ ಕೊರತೆಯಿಂದಾಗಿ ದೇಶವು ಪ್ರಮುಖ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ದೂರಿ ವಕೀಲ ಶೈಲೇಂದ್ರ ಮಣಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಎಸ್ವಿಎನ್ ಭಟ್ಟಿ ಅವರ ಪೀಠವು,ಆಸ್ಪತ್ರೆಗಳಲ್ಲಿ ಹಾವು ಕಡಿತಕ್ಕೆ ಚಿಕಿತ್ಸೆಯನ್ನು ಲಭ್ಯವಾಗಿಸಲು ‘ಏನನ್ನಾದರೂ ಮಾಡಲು’ ಎಲ್ಲ ರಾಜ್ಯಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುವಂತೆ ಕೇಂದ್ರಕ್ಕೆ ಸೂಚಿಸಿತು. ದೇಶಾದ್ಯಂತ ಈ ಸಮಸ್ಯೆಯಿದೆ ಎಂದು ಅದು ಕೇಂದ್ರದ ಪರ ವಕೀಲರಿಗೆ ಹೇಳಿತು.
ಅರ್ಜಿಗೆ ಉತ್ತರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಡಿಸೆಂಬರ್ 2024ರಲ್ಲಿ ಕೇಂದ್ರ ಮತ್ತು ಇತತರಿಗೆ ಸೂಚಿಸಿತ್ತು.
ಈ ವಿಷಯದಲ್ಲಿ ಕೈಗೊಳ್ಳಲಾಗಿರುವ ಎಲ್ಲ ಕ್ರಮಗಳ ವರದಿಯನ್ನು ಸರಕಾರವು ಸಲ್ಲಿಸಲಿದೆ ಎಂದು ವಕೀಲರು ತಿಳಿಸಿದರು. ಇದೇ ವೇಳೆ ಪೀಠವು, ರಾಜ್ಯಗಳಿಗೆ ತಮ್ಮ ಪ್ರತಿಅಫಿಡವಿಟ್ಗಳನ್ನು ಸಲ್ಲಿಸಲು ಆರು ವಾರಗಳ ಸಮಯಾವಕಾಶವನ್ನು ನೀಡಿತು.





