ದೇವಾಲಯಗಳಲ್ಲಿ ವಿಐಪಿಗಳಿಗೆ ವಿಶೇಷ ಸೌಲಭ್ಯ ಪ್ರಶ್ನಿಸಿದ ಪಿಐಎಲ್ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ವಿಐಪಿ ದರ್ಶನಕ್ಕೆ ಹೆಚ್ಚುವರಿ ಶುಲ್ಕ ವಿಧಿಸುವ ಪದ್ಧತಿಯ ವಿರುದ್ಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ದೇವಾಲಯಗಳಲ್ಲಿ ನಿರ್ದಿಷ್ಟ ವರ್ಗದ ಜನರಿಗೆ ಆದ್ಯತೆ, ಆಯ್ದ ಹಾಗೂ ವಿಶೇಷ ಸೌಲಭ್ಯ ನೀಡುವುದನ್ನು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನು ಒಳಗೊಂಡ ಪೀಠ, ಈ ವಿಷಯದ ನಿರ್ಧಾರ ಸಮಾಜ ಹಾಗೂ ದೇವಾಲಯದ ಆಡಳಿತ ಮಂಡಳಿಗೆ ಸೇರಿದ್ದು. ನ್ಯಾಯಾಲಯ ಯಾವುದೇ ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
‘‘ಯಾವುದೇ ವಿಶೇಷ ಸೌಲಭ್ಯ ನೀಡಬಾರದು ಎಂದು ನಾವು ಅಭಿಪ್ರಾಯಪಟ್ಟಿರಬಹುದು. ಆದರೆ, ನಾವು ನಿರ್ದೇಶನ ನೀಡಲು ಸಾಧ್ಯವಿಲ್ಲ. ಸಂವಿಧಾನ 32ನೇ ವಿಧಿಯ ಅಡಿಯಲ್ಲಿ ಕ್ರಮ ಕೈಗೊಳ್ಳಲು ಇದು ಸೂಕ್ತವಾದ ಪ್ರಕರಣ ಎಂದು ನಾವು ಭಾವಿಸುವುದಿಲ್ಲ. ಆದರೆ, ಅರ್ಜಿಯ ವಜಾ ಸೂಕ್ತ ಅಧಿಕಾರಿಗಳು ಸಮರ್ಪಕ ಕ್ರಮ ತೆಗೆದುಕೊಳ್ಳುವುದನ್ನು ತಡೆಯುವುದಿಲ್ಲ ಎಂದು ನಾವು ಸ್ಪಷ್ಟಪಡಿಸುತ್ತೇವೆ’’ ಎಂದು ಪೀಠ ಹೇಳಿದೆ.
ವೃಂದಾವನದ ಶ್ರೀ ರಾಧಾ ಮೋಹನ್ ದೇವಾಲಯದ ಸೇವಕ ವಿಜಯ ಕಿಶೋರ್ ಗೋಸ್ವಾಮಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.
ಶುಲ್ಕ ಭರಿಸಲು ಸಾಧ್ಯವಾಗದ ಭಕ್ತರಿಗೆ ಇದು ತಾರತಮ್ಯ ಎಸಗುವುದರಿಂದ ಸಂವಿಧಾನದ ಕಲಂ 14 ಹಾಗೂ 21ರಲ್ಲಿ ಹೇಳಲಾದ ಸಮಾನತೆಯ ತತ್ವವನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.







