ವರದಕ್ಷಿಣೆ ಪ್ರಕರಣ | ವಿಚಾರಣಾ ನ್ಯಾಯಾಲಯಗಳು ಪದೇ ಪದೇ ತಪ್ಪು ಮಾಡುತ್ತಿವೆ ; ನ್ಯಾಯಾಂಗ ಅಕಾಡೆಮಿಗಳು ಮಧ್ಯಪ್ರವೇಶಿಸಬೇಕು: ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ ಸೂಕ್ತ ಆಧಾರವಿಲ್ಲದೆ ಆರೋಪಿಗಳನ್ನು ದೋಷಿಯನ್ನಾಗಿಸುವ ತಪ್ಪನ್ನು ವಿಚಾರಣಾ ನ್ಯಾಯಾಲಯಗಳು ಪದೇ ಪದೇ ಮಾಡುತ್ತಿದ್ದು, ನ್ಯಾಯಾಂಗ ಅಕಾಡೆಮಿಗಳು ಮಧ್ಯ ಪ್ರವೇಶಿಸುವುದನ್ನು ಅನಿವಾರ್ಯವಾಗಿಸುತ್ತಿವೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಪತ್ನಿಯ ಸಾವಿನ ಪ್ರಕರಣದಲ್ಲಿ ವ್ಯಕ್ತಿಯೊಬ್ಬರನ್ನು ಬಿಡುಗಡೆಗೊಳಿಸಿದ ನ್ಯಾ. ಅಭಯ್ ಎಸ್. ಓಕಾ ಹಾಗೂ ನ್ಯಾ. ಉಜ್ಜಲ್ ಭುಯಾನ್ ಅವರನ್ನೊಳಗೊಂಡ ನ್ಯಾಯಪೀಠವು ಜನವರಿ 31, 2025ರ ತನ್ನ ತೀರ್ಪಿನಲ್ಲಿ ಮೇಲಿನಂತೆ ಅಭಿಪ್ರಾಯಪಟ್ಟಿದೆ.
►ಪ್ರಕರಣವೇನು?
ವಿವಾಹವಾದ ಕೇವಲ ಎರಡು ವರ್ಷಗಳೊಳಗೆ ಮಹಿಳೆಯೊಬ್ಬರು 1998ರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆರೋಪಿ ಪತಿ ಹಾಗೂ ಆತನ ಕುಟುಂಬದ ಸದಸ್ಯರು ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದಾರೆ ಎಂದು ಮೃತ ಮಹಿಳೆಯ ಕುಟುಂಬದ ಸದಸ್ಯರು ಆರೋಪಿಸಿದ್ದರು. ಆರೋಪಿ ಪತಿಯನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 ಬಿ ಹಾಗೂ 498 ಎ ಅಡಿ ದೋಷಿ ಎಂದು ಘೋಷಿಸಿದ್ದ ವಿಚಾರಣಾ ನ್ಯಾಯಾಲಯವು, ಆ ಎರಡು ಸೆಕ್ಷನ್ ಗಳಡಿ ಕ್ರಮವಾಗಿ ಏಳು ವರ್ಷ ಹಾಗೂ ಒಂದು ವರ್ಷ ಜೈಲುವಾಸದ ಶಿಕ್ಷೆ ವಿಧಿಸಿತ್ತು. ಆದರೆ, ಆರೋಪಿ ಪತಿಯ ಪೋಷಕರನ್ನು ಖುಲಾಸೆಗೊಳಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿತ್ತು.
ಮೃತ ಮಹಿಳೆಯ ಕುಟುಂಬದ ಸದಸ್ಯರು ಸೇರಿದಂತೆ ಸಾಕ್ಷ್ಯಗಳ ಪರಿಶೀಲನೆ ನಡೆಸಿದ ನ್ಯಾಯಪೀಠವು, ಗಮನಾರ್ಹ ಲೋಪ ಹಾಗೂ ವೈರುಧ್ಯಗಳಿರುವುದರಿಂದ ಮೇಲ್ಮನವಿದಾರನ ವಿರುದ್ಧದ ಅಪರಾಧಗಳನ್ನು ಪ್ರಾಸಿಕ್ಯೂಷನ್ ಸಂಶಯಕ್ಕೆಡೆ ಇಲ್ಲದಂತೆ ಸಾಬೀತು ಮಾಡುವಲ್ಲಿ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿತು.
“ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304-ಬಿಯನ್ನು 1986ರಲ್ಲಿ ಶಾಸನ ಪುಸ್ತಕಕ್ಕೆ ಸೇರ್ಪಡೆ ಮಾಡಲಾಯಿತು. ಈ ನ್ಯಾಯಾಲಯವು ಸೆಕ್ಷನ್ 304 ಬಿ ಅಡಿಯ ಅಪರಾಧದ ಘಟಕಗಳನ್ನು ಪದೇ ಪದೇ ವಿವರಿಸಿದ್ದರೂ, ವಿಚಾರಣಾ ನ್ಯಾಯಾಲಯಗಳು ಅದೇ ತಪ್ಪುಗಳನ್ನು ಪದೇ ಪದೇ ಮಾಡುತ್ತಿವೆ. ರಾಜ್ಯ ನ್ಯಾಯಾಂಗ ಅಕಾಡೆಮಿಗಳು ಈ ಸಂಬಂಧ ಮಧ್ಯಪ್ರವೇಶಿಸಬೇಕಿದೆ. ಬಹುಶಃ ಈ ಪ್ರಕರಣವು ನೈತಿಕ ಶಿಕ್ಷೆಯ ಪ್ರಕರಣವಾಗಿರುವಂತಿದೆ” ಎಂದು ಹೇಳಿತು.
ಸೆಕ್ಷನ್ 304 ಬಿ ಅಡಿಯ ಶಿಕ್ಷಾರ್ಹ ಅಪರಾಧದ ವಿಷಯ ಘಟಕಗಳನ್ನು ಪ್ರಾಸಿಕ್ಯೂಷನ್ ಸಾಬೀತು ಪಡಿಸುವಲ್ಲಿ ವಿಫಲವಾಗಿದೆ ಎಂದು ನ್ಯಾಯಾಲಯ ಬೊಟ್ಟುಮಾಡಿತು. ಸೆಕ್ಷನ್ 498 ಎ ಅಡಿಯ ಒಂದೇ ಒಂದು ಕ್ರೌರ್ಯವನ್ನು ಪ್ರಾಸಿಕ್ಯೂಷನ್ ಸಾಬೀತು ಮಾಡಿಲ್ಲ ಎಂದೂ ನ್ಯಾಯಪೀಠ ಹೇಳಿತು.
ಯಾವುದೇ ಸಾವನ್ನು ವರದಕ್ಷಿಣೆಯ ಸಾವು ಎಂದು ಕರೆಯಬೇಕಿದ್ದರೆ, ಸೆಕ್ಷನ್ 304 ಬಿಯ ಘಟಕಗಳನ್ನು ಸಾಬೀತುಪಡಿಸಿದರೆ ಮಾತ್ರ ಮೃತ ಮಹಿಳೆಯ ಪತಿ ಅಥವಾ ಆತನ ಸಂಬಂಧಿಕರು ವರದಕ್ಷಿಣೆ ಸಾವಿಗೆ ಕಾರಣವಾಗಿದ್ದಾರೆ ಎಂದು ಪರಿಗಣಿಸಬಹುದಾಗಿದೆ. ಅರ್ಥಾತ್, ಸಾಮಾನ್ಯ ಸಂದರ್ಭಗಳಲ್ಲಿನ ಸಾವಲ್ಲದೆ, ಏಳು ವರ್ಷಕ್ಕೂ ಮುನ್ನ ಮಹಿಳೆಯು ಮೃತ ಪಟ್ಟಿದ್ದರೆ, ಮೃತ ಮಹಿಳೆಯು ತನ್ನ ಪತಿ ಮತ್ತು ಅಥವಾ ಆತನ ಸಂಬಂಧಿಕರಿಂದ ವರದಕ್ಷಿಣೆಯ ಕಿರುಕುಳಕ್ಕೆ ಒಳಗಾಗಿರಬೇಕಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಈ ಪ್ರಕರಣದಲ್ಲಿ ಮೇಲ್ಮನವಿದಾರರ ಪತ್ನಿಯು ವಿವಾಹವಾದ ಏಳು ವರ್ಷಗಳೊಳಗಾಗಿ ಮೃತಪಟ್ಟಿದ್ದಾರೆ ಎಂಬುದರ ಬಗ್ಗೆ ಯಾವುದೇ ವ್ಯಾಜ್ಯವಿಲ್ಲ. ಹೀಗಾಗಿ, ಆಕೆಯ ಸಾವಿಗೂ ಮುನ್ನ, ಆರೋಪಿಯು ವರದಕ್ಷಿಣೆಗಾಗಿ ಆಕೆಯ ಮೇಲೆ ಕ್ರೌರ್ಯವೆಸಗಿರುವ ಅಥವಾ ಕಿರುಕುಳ ನೀಡಿರುವ ಸಂಗತಿಯನ್ನು ಸಾಕ್ಷ್ಯಾಧಾರ ಕಾಯ್ದೆಯ ಸೆಕ್ಷನ್ 113 ಬಿ ಅಡಿ ಸಾಬೀತು ಪಡಿಸಬೇಕಾಗುತ್ತದೆ ಎಂದೂ ನ್ಯಾಯಾಲಯ ಹೇಳಿತು.
“ಹೀಗಾಗಿ, ಈ ಪ್ರಕರಣದಲ್ಲಿ ಸೆಕ್ಷನ್ 113 ಬಿಯನ್ನು ಅನ್ವಯಿಸಬೇಕಿದ್ದರೆ, ಮಹಿಳೆಯು ಮೃತಪಡುವುದಕ್ಕೂ ಮುನ್ನ, ಆಕೆಯ ಮೇಲೆ ಮೇಲ್ಮನವಿದಾರರು ಕ್ರೌರ್ಯವೆಸಗಿದ್ದಾರೆ ಅಥವಾ ಕಿರುಕುಳ ನೀಡಿದ್ದಾರೆ ಎಂಬುದನ್ನು ಪ್ರಾಸಿಕ್ಯೂಷನ್ ಸಾಬೀತು ಪಡಿಸಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿತು. ಈ ಸಂಗತಿಗಳು ಸಾಬೀತಾಗುವವರೆಗೂ, ಸಾಕ್ಷ್ಯಾಧಾರ ಕಾಯ್ದೆಯ ಸೆಕ್ಷನ್ 113 ಬಿ ಅಡಿಯ ಊಹೆಯನ್ನು ಹೇರಬಾರದು ಎಂದು ಅದು ಹೇಳಿತು.
ಮೃತ ಮಹಿಳೆಯ ತಾಯಿಯ ಸಾಕ್ಷ್ಯವನ್ನು ಉಲ್ಲೇಖಿಸಿದ ನ್ಯಾಯಪೀಠವು, “ವಿಷಯದ ಮೂಲಕ್ಕೆ ಹೋಗುವ ಕೆಲವೊಂದು ಮೂಲಭೂತ ಸಂಗತಿಗಳಿವೆ. ಮೇಲ್ಮನವಿದಾರರಿಂದ ಕಿರುಕುಳವಾಗಿದೆ ಎಂಬುದನ್ನು ಯಾವುದೇ ನಿರ್ದಿಷ್ಟ ಸೆಕ್ಷನ್ ನಡಿ ಆಕೆ ನಿರೂಪಿಸಿಲ್ಲ. ಇದು ಸೆಕ್ಷನ್ 304 ಬಿಯ ಅತ್ಯಗತ್ಯ ಘಟಕವಾಗಿದೆ. ಅದನ್ನು ಆಕೆಯ ಸಾಕ್ಷಿಯಿಂದ ನಿರೂಪಿಸಲಾಗಿಲ್ಲ” ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿತು.
ಸೌಜನ್ಯ: deccanherald.com







