ಗುಂಪು ಹಿಂಸಾಚಾರ | ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಲು ಅಧಿಕಾರಿಗಳು ಬದ್ಧ; ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಗುಂಪುಗಳು ವ್ಯಕ್ತಿಗಳನ್ನು ಥಳಿಸಿ ಕೊಲ್ಲುವುದಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ದಿಲ್ಲಿಯಲ್ಲಿ ಕುಳಿತುಕೊಂಡು ಸೂಕ್ಷ್ಮವಾಗಿ ಪರಿಶೀಲಿಸಲು ಸಾಧ್ಯವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿತು ಮತ್ತು ಇಂಥ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ವಜಾಗೊಳಿಸಿತು.
ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ನ್ಯಾಯಪೀಠವೊಂದು, 2018ರ ಸುಪ್ರೀಂ ಕೋರ್ಟ್ ತೀರ್ಪೊಂದನ್ನು ಉಲ್ಲೇಖಿಸಿತು. ಗುಂಪು ಹಿಂಸಾಚಾರ ಮತ್ತು ‘‘ಗೋರಕ್ಷಕರ’’ ಹಿಂಸೆಯನ್ನು ನಿಭಾಯಿಸಲು ‘‘ಮುನ್ನೆಚ್ಚರಿಕೆ, ಪರಿಹಾರ ಮತ್ತು ಶಿಕ್ಷೆ’’ಯ ರೂಪದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದಾಗಿ ಆ ತೀರ್ಪು ನಿರ್ದೇಶನ ನೀಡಿದೆ.
‘‘ಆದರೆ, ಇಲ್ಲಿ ದಿಲ್ಲಿಯಲ್ಲಿ ಕುಳಿತುಕೊಂಡು ದೇಶದ ವಿವಿಧ ರಾಜ್ಯಗಳ ವಿವಿಧ ಪ್ರದೇಶಗಳಲ್ಲಿ ನಡೆಯುವ ಘಟನೆಗಳ ಮೇಲೆ ನಿಗಾ ಇಡಲು ನಮಗೆ ಸಾಧ್ಯವಾಗುವುದಿಲ್ಲ. ಅಂಥ ಸೂಕ್ಷ್ಮ ವಿಶ್ಲೇಷಣೆಯನ್ನು ಮಾಡಲು ಈ ನ್ಯಾಯಾಲಯಕ್ಕೆ ಸಾಧ್ಯವಾಗುವುದಿಲ್ಲ ಎನ್ನುವುದು ನಮ್ಮ ನಿಲುವಾಗಿದೆ’’ ಎಂದು ಅರ್ಜಿಯನ್ನು ವಜಾಗೊಳಿಸುತ್ತಾ ನ್ಯಾಯಪೀಠವು ಹೇಳಿತು.
ವಿಶೇಷವಾಗಿ ಮುಸ್ಲಿಮರ ವಿರುದ್ಧ ‘‘ಗೋರಕ್ಷಕರು’’ ನಡೆಸುವ ಗುಂಪು ಥಳಿತ ಮತ್ತು ಹಿಂಸಾಚಾರದ ಘಟನೆಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದಕ್ಕಾಗಿ, ಸುಪ್ರೀಂ ಕೋರ್ಟ್ನ 2018ರ ತೀರ್ಪಿಗೆ ಅನುಸಾರವಾಗಿ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಲು ರಾಜ್ಯಗಳಿಗೆ ನಿರ್ದೇಶನಗಳನ್ನು ನೀಡಬೇಕು ಎಂದು ಕೋರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಹೇಳಿತು.
2018ರ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳನ್ನು ಅನುಸರಿಸಲು ಅಧಿಕಾರಿಗಳು ಬದ್ಧರಾಗಿದ್ದಾರೆ ಎಂದು ಅದು ಹೇಳಿತು.







