ಕ್ರಿಮಿನಲ್ ಕಾನೂನಿನ ರಕ್ಷಣಾ ಕ್ರಮಗಳು ಕಸ್ಟಮ್ಸ್, ಜಿಎಸ್ಟಿ ಕಾಯ್ದೆಯಡಿ ಆರೋಪಿಗಳಿಗೂ ಅನ್ವಯವಾಗುತ್ತವೆ: ಸುಪ್ರೀಂಕೋರ್ಟ್

ಸುಪ್ರೀಂಕೋರ್ಟ್ | PC : PTI
ಹೊಸದಿಲ್ಲಿ: ಕ್ರಿಮಿನಲ್ ಕಾನೂನಿನಡಿಯ ರಕ್ಷಣಾತ್ಮಕ ಕ್ರಮಗಳು ಕಸ್ಟಮ್ಸ್, ಜಿಎಸ್ಟಿ ಕಾಯ್ದೆಗಳಡಿ ಆರೋಪಿಗಳಿಗೂ ಅನ್ವಯವಾಗುತ್ತವೆ ಎಂದು ಸರ್ವೋಚ್ಚ ನ್ಯಾಯಾಲಯವು ಗುರುವಾರ ತೀರ್ಪು ನೀಡಿದೆ.
ಜಿಎಸ್ಟಿ ಮತ್ತು ಕಸ್ಟಮ್ಸ್ ಕಾಯ್ದೆಗಳ ದಂಡನಾ ನಿಬಂಧನೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ 279 ಅರ್ಜಿಗಳಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಸಂಜೀವ ಖನ್ನಾ ಹಾಗೂ ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ ಮತ್ತು ಬೇಲಾ ಎಂ.ತ್ರಿವೇದಿ ಅವರ ಪೀಠವು ತೀರ್ಪನ್ನು ಪ್ರಕಟಿಸಿತು.
ಜಿಎಸ್ಟಿ ಮತ್ತು ಕಸ್ಟಮ್ಸ್ ಕಾಯ್ದೆಗಳಡಿ ಬಂಧನ ಮತ್ತು ವಿಚಾರಣೆಗಳಿಗೆ ಸಂಬಂಧಿಸಿದ ನಿಬಂಧನೆಗಳ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದ ಸರ್ವೋಚ್ಚ ನ್ಯಾಯಾಲಯವು,ಬಾಕಿ ವಸೂಲಿಗಾಗಿ ಬಂಧನಗಳನ್ನು ನಡೆಸುವಂತಿಲ್ಲ ಮತ್ತು ಇಂತಹ ಪ್ರಕರಣಗಳಲ್ಲಿ ಸಂವಿಧಾನದ ವಿಧಿ 226 ಅಡಿಯಲ್ಲಿ ಪರಿಹಾರಗಳು ಲಭ್ಯವಿವೆ ಎಂದು ಸ್ಪಷ್ಟಪಡಿಸಿತು.
ಸಂವಿಧಾನದ ವಿಧಿ 226 ಮೂಲಭೂತ ಹಕ್ಕುಗಳು ಸೇರಿದಂತೆ ಹಕ್ಕುಗಳನ್ನು ಜಾರಿಗೊಳಿಸಲು ಆದೇಶಗಳನ್ನು ಹೊರಡಿಸುವ ಅಧಿಕಾರವನ್ನು ಉಚ್ಚ ನ್ಯಾಯಾಲಯಗಳಿಗೆ ನೀಡಿದೆ.
ಜಿಎಸ್ಟಿ ಮತ್ತು ಕಸ್ಟಮ್ಸ್ ಕಾಯ್ದೆಗಳಡಿ ಬಲವಂತದ ಕ್ರಮಗಳ ವಿರುದ್ಧ ಅಗತ್ಯ ಸುರಕ್ಷತಾ ಕ್ರಮಗಳ ಕುರಿತಂತೆ ಸರ್ವೋಚ್ಚ ನ್ಯಾಯಾಲಯವು,ಆರೋಪಿಗಳ ವಿರುದ್ಧ ಕ್ರಮವನ್ನು ಆರಂಭಿಸುವ ಮುನ್ನ ಅಧಿಕಾರಿಗಳು ಬಂಧನಗಳನ್ನು ನಿರಂಕುಶವಾಗಿ ಮಾಡಲಾಗುವುದಿಲ್ಲ ಎನ್ನುವುದಕ್ಕೆ ನಂಬಲರ್ಹ ಕಾರಣಗಳನ್ನು ನೀಡಬೇಕು ಎಂದು ತೀರ್ಪು ನೀಡಿದೆ. ಇದು ಅರವಿಂದ ಕೇಜ್ರಿವಾಲ್ ಪ್ರಕರಣದಲ್ಲಿ ನಿಗದಿಗೊಳಿಸಿದ್ದ ತತ್ವಗಳಿಗೆ ಅನುಗುಣವಾಗಿದೆ.







