ಕೊಳಕು ಭಾಷೆಯನ್ನು ಬಳಸುವುದು ಟ್ಯಾಲೆಂಟ್ ಅಲ್ಲ: ಸುಪ್ರೀಂ ಕೋರ್ಟ್
ಇಂಡಿಯಾಸ್ ಗಾಟ್ ಲೇಟೆಂಟ್ ವಿವಾದ | ರಣವೀರ ಅಲಹಾಬಾದಿಯಾ ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿ

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಸರ್ವೋಚ್ಚ ನ್ಯಾಯಾಲಯವು ಸೋಮವಾರ ಕಾರ್ಯಕ್ರಮಗಳು ಅಗತ್ಯ ನೈತಿಕ ಮಾನದಂಡಗಳನ್ನು ಕಾಯ್ದುಕೊಳ್ಳಬೇಕು ಎಂಬ ಷರತ್ತಿನೊಂದಿಗೆ ಯೂಟ್ಯೂಬರ್ ರಣವೀರ ಅಲಹಾಬಾದಿಯಾ ಶೋಗಳನ್ನು ನಡೆಸಲು ಅನುಮತಿ ನೀಡಿದೆ. ಇದೇ ವೇಳೆ ಅಲಹಾಬಾದಿಯಾ ಮತ್ತು ಆಶಿಷ್ ಚಂಚ್ಲಾನಿ ಅವರಿಗೆ ಬಂಧನದ ವಿರುದ್ಧ ನೀಡಿದ್ದ ಮಧ್ಯಂತರ ರಕ್ಷಣೆಯನ್ನು ವಿಸ್ತರಿಸಿದ ನ್ಯಾಯಾಲಯವು,ಪ್ರಕರಣದಲ್ಲಿ ತನಿಖೆಗೆ ಸಹಕರಿಸುವಂತೆ ಆದೇಶಿಸಿದೆ.
ಇಂಡಿಯಾಸ್ ಗಾಟ್ ಲೇಟೆಂಟ್ನ ಕಾರ್ಯಕ್ರಮವೊಂದರಲ್ಲಿ ಅಸಭ್ಯ ಹೇಳಿಕೆಗಳಿಗಾಗಿ ಶೋದ ಸಂಘಟಕರನ್ನು ತೀವ್ರ ತರಾಟೆಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಎನ್.ಕೋಟೀಶ್ವರ ಸಿಂಗ್ ಅವರ ಪೀಠವು,‘ಕೊಳಕು ಭಾಷೆಯನ್ನು ಬಳಸುವುದು ಟ್ಯಾಲೆಂಟ್ ಅಲ್ಲ ’ ಎಂದು ತಿವಿಯಿತು.
ಅವಹೇಳನಕಾರಿ ಹೇಳಿಕೆಗಳಿಗಾಗಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ಗಳನ್ನು ರದ್ದುಗೊಳಿಸುವಂತೆ ಅಥವಾ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಫ್ಐಆರ್ಗಳನ್ನು ವಿಲೀನಗೊಳಿಸುವಂತೆ ಅಲಹಾಬಾದಿಯಾ ಮತ್ತು ಸಹ ಯೂಟ್ಯೂಬರ್ಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಪೀಠವು ಕೈಗೆತ್ತಿಕೊಂಡಿತ್ತು.
ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸದೆ ಸಮಾಜವು ಸ್ವೀಕರಿಸಲು ಸಾಧ್ಯವಿಲ್ಲದ ಕಾರ್ಯಕ್ರಮಗಳ ಪ್ರಸಾರವನ್ನು ತಡೆಯಲು ನಿಯಂತ್ರಣ ಕ್ರಮಗಳನ್ನು ನಿಗದಿಗೊಳಿಸಬೇಕು ಎಂದು ಪೀಠವು ಹೇಳಿತು.
ಅಲಹಾಬಾದಿಯಾ ನೇಮಿಸಿಕೊಂಡಿರುವ 250ಕ್ಕೂ ಅಧಿಕ ಉದ್ಯೋಗಿಗಳ ಜೀವನೋಪಾಯದ ಪ್ರಶ್ನೆಯನ್ನು ಪರಿಗಣಿಸಿದ ಸರ್ವೋಚ್ಚ ನ್ಯಾಯಾಲಯವು ಕಾರ್ಯಕ್ರಮಗಳನ್ನು ಪುನರಾರಂಭಿಸಲು ಅನುಮತಿ ನೀಡಿತು. ತನ್ನ ಕಾರ್ಯಕ್ರಮಗಳು ಎಲ್ಲ ವಯೋಮಾನದ ವೀಕ್ಷಕರು ನೋಡುವಂತೆ ನೈತಿಕತೆ ಮತ್ತು ಸಭ್ಯತೆಯ ಅಗತ್ಯ ಮಾನದಂಡಗಳನ್ನು ಕಾಯ್ದುಕೊಳ್ಳುತ್ತವೆ ಎಂದು ಮುಚ್ಚಳಿಕೆಯನ್ನು ನೀಡಲು ಅದು ಅಲಹಾಬಾದಿಯಾಗೆ ಆದೇಶಿಸಿತು.
ವಿದೇಶ ಪ್ರಯಾಣಕ್ಕೆ ಅನುಮತಿ ನೀಡಬೇಕೆಂಬ ಅಲಹಾಬಾದಿಯಾ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯವು,ತನಿಖೆಯಲ್ಲಿ ಅವರ ಅಗತ್ಯವಿಲ್ಲ ಎಂದಾದಾಗ ಈ ಮನವಿಯನ್ನು ಪರಿಶೀಲಿಸಬಹುದಾಗಿದೆ ಎಂದು ಹೇಳಿತು.
ಆನ್ಲೈನ್ ವೇದಿಕೆಗಳಲ್ಲಿನ ಕಂಟೆಂಟ್ಗಳನ್ನು ಕೇಂದ್ರವು ನಿಯಂತ್ರಿಸುವ ಅಗತ್ಯವಿದೆ ಎಂದೂ ಸರ್ವೋಚ್ಚ ನ್ಯಾಯಾಲಯವು ತಿಳಿಸಿತು.







