ಮಕ್ಕಳ ಹಂತಕ ಮಾಜಿ ಬ್ಯಾಂಕ್ ಮ್ಯಾನೇಜರ್ನ ಗಲ್ಲುಶಿಕ್ಷೆಯನ್ನು ಜೀವಿತಾವಧಿ ಶಿಕ್ಷೆಗೆ ತಗ್ಗಿಸಿದ ಸುಪ್ರೀಂ ಕೋರ್ಟ್
ಮಂಗಳೂರಿನಲ್ಲಿ 2010ರಲ್ಲಿ ನಡೆದಿದ್ದ ಪ್ರಕರಣ

ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ: ಸರ್ವೋಚ್ಚ ನ್ಯಾಯಾಲಯವು ಕ್ರಿಮಿನಲ್ ಹಿನ್ನೆಲೆಗಳ ಕೊರತೆ ಮತ್ತು ದೋಷಪೂರಿತ ಶಿಕ್ಷೆ ಪ್ರಕ್ರಿಯೆಯನ್ನು ಉಲ್ಲೇಖಿಸಿ ತನ್ನಿಬ್ಬರು ಮಕ್ಕಳನ್ನು ಹತ್ಯೆಗೈಯ್ದಿದ್ದ ಕರ್ನಾಟಕದ ಮಾಜಿ ಬ್ಯಾಂಕ್ ಮ್ಯಾನೇಜರ್ಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಜೀವಿತಾವಧಿ ಜೈಲುಶಿಕ್ಷೆಗೆ ತಗ್ಗಿಸಿದೆ.
ವಿಚಾರಣಾ ನ್ಯಾಯಾಲಯ ಮತ್ತು ಕರ್ನಾಟಕ ಉಚ್ಛ ನ್ಯಾಯಾಲಯ ಆರೋಪಿಗೆ ಮರಣದಂಡನೆಯನ್ನು ವಿಧಿಸುವ ಮುನ್ನ ಅದು ಅನಿವಾರ್ಯವಾಗಿತ್ತೇ ಎನ್ನುವ ಬಗ್ಗೆ ಸೂಕ್ತ ಚಿಂತನೆಯನ್ನು ನಡೆಸಿರಲಿಲ್ಲ ಎಂದು ನ್ಯಾಯಮೂರ್ತಿಗಳಾದ ವಿಕ್ರಮನಾಥ್, ಸಂಜಯ ಕರೋಲ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಫೆ.13ರಂದು ಪ್ರಕಟಿಸಿದ ತೀರ್ಪಿನಲ್ಲಿ ಬೆಟ್ಟು ಮಾಡಿದೆ.
ಮೇಲ್ಮನವಿದಾರ ಯಾವುದೇ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿರಲಿಲ್ಲ. ಮೃತರೊಂದಿಗೆ ಉತ್ತಮ ಸಂಬಂಧಗಳನ್ನು ಹೊಂದಿದ್ದ ಮತ್ತು ವಿಚಾರಣಾ ನ್ಯಾಯಾಲಯವು ಮರಣದಂಡನೆಯ ಅಗತ್ಯವನ್ನು ತಗ್ಗಿಸುವ ಅಂಶಗಳನ್ನು ಪರಿಗಣಿಸಿರಲಿಲ್ಲ ಎಂದು ಪೀಠವು ಹೇಳಿದೆ. ಹೀಗಾಗಿ ಉಭಯ ನ್ಯಾಯಾಲಯಗಳು ಮರಣದಂಡನೆಯನ್ನು ವಿಧಿಸಲು ಕಟ್ಟುನಿಟ್ಟಾದ ಕಾನೂನು ಮಾನದಂಡಗಳನ್ನು ಅನುಸರಿಸುವಲ್ಲಿ ವಿಫಲಗೊಂಡಿವೆ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು,ಆರೋಪಿಯ ಮರಣದಂಡನೆಯನ್ನು ರದ್ದುಗೊಳಿಸಿತು ಮತ್ತು ಜೀವಿತಾವಧಿಯವರೆಗೆ ಜೈಲಿನಲ್ಲಿರಿಸುವಂತೆ ಆದೇಶಿಸಿತು.
ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿದ್ದ ರಮೇಶ್ ನಾಯ್ಕ್, ತನ್ನ ನಾದಿನಿ ಮತ್ತು ಆಕೆಯ ಸಹೋದ್ಯೋಗಿಯ ನಡುವಿನ ಸಂಬಂಧದ ಬಗ್ಗೆ ತನ್ನ ಪತ್ನಿಯ ಕುಟುಂಬದೊಂದಿಗೆ ವಿವಾದದ ಬಳಿಕ ಜೂನ್ 2010ರಲ್ಲಿ ತನ್ನ ಇಬ್ಬರು ಮಕ್ಕಳನ್ನು ಹತ್ಯೆಗೈದಿದ್ದ. ಇದಕ್ಕೂ ಮುನ್ನ ತುಮಕೂರು ಜಿಲ್ಲೆಯಲ್ಲಿ ತನ್ನ ಅತ್ತೆ ಮತ್ತು ನಾದಿನಿಯನ್ನು ಕೊಲೆ ಮಾಡಿ ಅವರ ಶವಗಳನ್ನು ಮನೆಯ ನೀರಿನ ಸಂಪ್ನಲ್ಲಿ ಹಾಕಿದ್ದ. ಬಳಿಕ 10 ಮತ್ತು ಮೂರೂವರೆ ವರ್ಷ ಪ್ರಾಯದ ತನ್ನ ಮಕ್ಕಳನ್ನೂ ಕೊಲ್ಲಲು ಹಾಗೂ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಆತ ನಿರ್ಧರಿಸಿದ್ದ.
ನಾಯ್ಕ್ನ ಪತ್ನಿ ಮಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದ. ಮರುದಿನ ಮಂಗಳೂರಿಗೆ ತೆರಳಿದ್ದ ನಾಯ್ಕ್ ಮಕ್ಕಳನ್ನು ತಿರುಗಾಡಿಸುವ ನೆಪದಲ್ಲಿ ಅವರನ್ನು ತನ್ನೊಂದಿಗೆ ಕರೆದೊಯ್ದಿದ್ದ. ಮಂಗಳೂರಿಗೆ ಸಮೀಪದ ನಿರ್ಜನ ತೋಟದಲ್ಲಿಯ ಕೆರೆಗೆ ಮಕ್ಕಳನ್ನು ತಳ್ಳಿ ಹತ್ಯೆ ಮಾಡಿದ್ದ ಆತ ಬಳಿಕ ಪತ್ನಿಗೆ ಸಂದೇಶ ಕಳುಹಿಸಿ ತನ್ನ ಕೃತ್ಯದ ಬಗ್ಗೆ ತಿಳಿಸಿದ್ದಲ್ಲದೆ,ಅವರಿಗೂ ಆತ್ಮಹತ್ಯೆ ಮಾಡಿಕೊಳ್ಳುವಂತೆ ಸೂಚಿಸಿದ್ದ. ಗಾಬರಿಯಾಗಿದ್ದ ಪತ್ನಿ ತಕ್ಷಣ ಪೋಲಿಸರಿಗೆ ಮಾಹಿತಿ ನೀಡಿದ್ದರು.
ಫೆ.13ರ ತೀರ್ಪು ಮಕ್ಕಳ ಹತ್ಯೆಗೆ ಸಂಬಂಧಿಸಿದ್ದು,ಅತ್ತೆ-ನಾದಿನಿಯ ಹತ್ಯೆಗಳಿಗಾಗಿ ನಾಯ್ಕ್ನನ್ನು ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಲಾಗಿದೆ.
2013ರಲ್ಲಿ ವಿಚಾರಣಾ ನ್ಯಾಯಾಲಯವು ನಾಯ್ಕ್ಗೆ ಮರಣದಂಡನೆಯನ್ನು ವಿಧಿಸಿದ್ದು, 2017ರಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯವು ಅದನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ನಾಯ್ಕ್ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದ.
ಮರಣದಂಡನೆ ವಿಧಿಸುವ ಮುನ್ನ ನ್ಯಾಯಾಲಯಗಳು ಅಪರಾಧಿಯು ಸುಧಾರಣೆಗೊಳ್ಳುವ ಸಾಧ್ಯತೆಯನ್ನು ಮೀರಿದ್ದಾನೆಯೇ ಎನ್ನುವುದನ್ನು ಪರಿಶೀಲಿಸಬೇಕು, ಕೇವಲ ಅಪರಾಧದ ಕ್ರೌರ್ಯವು ಸ್ವಯಂಚಾಲಿತವಾಗಿ ಮರಣದಂಡನೆಯನ್ನು ಅಗತ್ಯವಾಗಿಸುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿದೆ.







