ತಾವು ಐಪಿಎಸ್,ಐಫ್ಎಸ್ ಅಧಿಕಾರಿಗಳಿಗಿಂತ ಶ್ರೇಷ್ಠರು ಎಂದು ಬಿಂಬಿಸಿಕೊಳ್ಳಲು ಐಎಎಸ್ಗಳು ಬಯಸುತ್ತಾರೆ: ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ: ಭಾರತೀಯ ಆಡಳಿತ ಸೇವೆ(ಐಎಎಸ್)ಯ ಅಧಿಕಾರಿಗಳು ತಾವು ಭಾರತೀಯ ಪೋಲಿಸ್ ಸೇವೆ (ಐಪಿಎಸ್) ಮತ್ತು ಭಾರತೀಯ ಅರಣ್ಯ ಸೇವೆ(ಐಎಫ್ಎಸ್) ಅಧಿಕಾರಿಗಳಿಗಿಂತ ಶ್ರೇಷ್ಠರು ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ ಎಂಬ ಮಹತ್ವದ ಅಭಿಪ್ರಾಯವನ್ನು ಸರ್ವೋಚ್ಚ ನ್ಯಾಯಾಲಯವು ಬುಧವಾರ ವ್ಯಕ್ತಪಡಿಸಿದೆ.
ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ(ಸಿಎಎಂಪಿಎ)ದ ಹಣದ ದುರ್ಬಳಕೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಎ.ಜಿ.ಮಸಿಹ್ ಅವರ ಪೀಠವು,‘ಐಎಎಸ್ ಅಧಿಕಾರಿಗಳು ತಾವು ಐಪಿಎಸ್ ಮತ್ತು ಐಎಫ್ಎಸ್ ಅಧಿಕಾರಿಗಳಿಗಿಂತ ಶ್ರೇಷ್ಠರು ಎಂದು ಬಿಂಬಿಸಿಕೊಳ್ಳುವನ್ನು ನಾವು ಸರಕಾರಿ ವಕೀಲರಾಗಿ ಮತ್ತು ನ್ಯಾಯಾಧೀಶರಾಗಿ ನಮ್ಮ ಅನುಭವದಲ್ಲಿ ಕಂಡಿದ್ದೇವೆ ’ ಎಂದು ಹೇಳಿತು.
‘ಮೂರು ವರ್ಷಗಳ ಕಾಲ ಸರಕಾರಿ ವಕೀಲನಾಗಿ ಮತ್ತು 22 ವರ್ಷಗಳ ಕಾಲ ನ್ಯಾಯಾಧೀಶನಾಗಿ ನನ್ನ ಅನುಭವದಿಂದ ಐಎಎಸ್ ಅಧಿಕಾರಿಗಳು ತಾವು ಐಪಿಎಸ್ ಮತ್ತು ಐಎಫ್ಎಸ್ ಅಧಿಕಾರಿಗಳಿಗಿಂತ ಶ್ರೇಷ್ಠರು ಎಂದು ಬಿಂಬಿಸಿಕೊಳ್ಳಲು ಬಯಸುತ್ತಾರೆ ಎಂದು ನಾನು ಹೇಳಬಲ್ಲೆ. ಐಎಎಸ್ ಅಧಿಕಾರಿಗಳ ಈ ಪ್ರವೃತ್ತಿಯು ಎಲ್ಲ ರಾಜ್ಯಗಳಲ್ಲಿಯೂ ಇದ್ದು,ಇದು ಐಪಿಎಸ್ ಮತ್ತು ಐಎಫ್ಎಸ್ಗಳಲ್ಲಿ ಅಸಮಾಧಾನಕ್ಕೆ,ಅಧಿಕಾರಿಗಳ ನಡುವೆ ಆಂತರಿಕ ಸಂಘರ್ಷಕ್ಕೆ ಕಾರಣವಾಗಿದೆ. ತಾವು ಒಂದೇ ಕೇಡರ್ನ ಭಾಗವಾಗಿದ್ದರೂ ಐಎಎಸ್ ಅಧಿಕಾರಿಗಳು ತಮ್ಮ ಮೇಲೆ ಸವಾರಿ ಮಾಡುವ ಬಗ್ಗೆ ಅವರಲ್ಲಿ ಎದೆಯುರಿಯಿದೆ ’ಎಂದು ನ್ಯಾ.ಗವಾಯಿ ಹೇಳಿದರು.
ವಿಚಾರಣೆ ಸಂದರ್ಭದಲ್ಲಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು,ಅಧಿಕಾರಿಗಳ ನಡುವಿನ ಆಂತರಿಕ ಸಂಘರ್ಷಗಳನ್ನು ಬಗೆಹರಿಸಲು ತಾನು ಪ್ರಯತ್ನಿಸುವುದಾಗಿ ಪೀಠಕ್ಕೆ ಭರವಸೆ ನೀಡಿದರು.
ಅರಣ್ಯೀಕರಣ ನಿಧಿಯನ್ನು ಐಫೋನ್ಗಳು ಮತ್ತು ಲ್ಯಾಪ್ಟಾಪ್ಗಳ ಖರೀದಿಯಂತಹ ಅನ್ಯ ಉದ್ದೇಶಗಳಿಗೆ ಬಳಸಲಾಗುತ್ತಿರುವ ಕುರಿತು ಕಳವಳವನ್ನು ವ್ಯಕ್ತಪಡಿಸಿದ ಸರ್ವೋಚ್ಚ ನ್ಯಾಯಾಲಯವು ಈ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಸಂಬಂಧಿಸಿದ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿತು.







