ಸರಕಾರ ತನ್ನಿಚ್ಛೆಯಂತೆ ನೇಮಕಾತಿಯನ್ನು ನಿರಾಕರಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ | PTI
ಹೊಸ ದಿಲ್ಲಿ: ಸಂಭವನೀಯ ಪಟ್ಟಿ ಅಥವಾ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗೆ ನೇಮಕಾತಿಯ ಮೇಲೆ ಯಾವುದೇ ಹಕ್ಕು ಚಲಾಯಿಸುವ ಅಧಿಕಾರ ಇಲ್ಲದಿದ್ದರೂ, ನೇಮಕಾತಿ ಪ್ರಾಧಿಕಾರವು ಆಯ್ಕೆ ಸಮಿತಿಯನ್ನು ನಿರ್ಲಕ್ಷಿಸಿ, ತನ್ನ ಇಚ್ಛಾನುಸಾರ ನೇಮಕಾತಿಯನ್ನು ನಿರಾಕರಿಸವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ.
2014ರಲ್ಲಿ ಅಸ್ಸಾಂ ಅರಣ್ಯ ರಕ್ಷಣಾ ಪಡೆಯಲ್ಲಿ 104 ಕಾನ್ ಸ್ಟೇಬಲ್ ಗಳ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿದ್ದ ಹಿಂದಿನ ಸರಕಾರದ ನಿರ್ಧಾರವನ್ನು ವಿಧಾನಸಭಾ ಚುನಾವಣೆಯ ನಂತರ, ಜುಲೈ 4, 2016ರಲ್ಲಿ ರದ್ದುಗೊಳಿಸಿದ್ದ ನೂತನ ಅಸ್ಸಾಂ ಸರಕಾರದ ನಿರ್ಧಾರವನ್ನು ಅಸ್ಸಾಂ ಹೈಕೋರ್ಟ್ ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅಸ್ಸಾಂ ಸರಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಯ ವೇಳೆ ನ್ಯಾ. ದೀಪಂಕರ್ ದತ್ತ ಹಾಗೂ ನ್ಯಾ. ಮನಮೋಹನ್ ಅವರನ್ನೊಳಗೊಂಡ ನ್ಯಾಯಪೀಠ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿತು.
“ಹುದ್ದೆಗಳಿದ್ದೂ ಹಾಗೂ ಮಾನ್ಯತೆ ಹೊಂದಿರುವ ಆಯ್ಕೆ ಪಟ್ಟಿ ಇದ್ದೂ, ನೇಮಕಾತಿ ಮಾಡಿಕೊಳ್ಳಕೂಡದು ಎಂಬ ಯಾವುದೇ ನಿರ್ಧಾರವು ನೀತಿ ನಿರೂಪಣೆಯ ಸ್ವರೂಪವನ್ನು ಹೊಂದಿರುತ್ತದೆ. ಸರಕಾರಿ ಉದ್ಯೋಗ ಪಡೆಯುವುದು ಹಲವಾರು ಜನರ ಕನಸಾಗಿದ್ದು, ಅವರು ಅದಕ್ಕಾಗಿ ಸಿದ್ಧಗೊಳ್ಳಲು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿರುತ್ತಾರೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು” ಎಂದೂ ನ್ಯಾಯಪೀಠ ಹೇಳಿತು.
ಒಂದು ವೇಳೆ ಉದ್ಯೋಗ ನೇಮಕಾತಿಯ ಮಧ್ಯದಲ್ಲೇ ನೇಮಕಾತಿ ಪ್ರಕ್ರಿಯೆಯನ್ನು ಕೈಬಿಡುವ ನಿರ್ಧಾರ ಕೈಗೊಂಡರೆ, ಅದನ್ನು ಅನ್ವಯಿಸುವಂತಹ ನೀತಿ ನಿರ್ಧಾರ ಹಾಗೂ ಸಮರ್ಥನೀಯ ಕಾರಣಗಳಿರಬೇಕು ಹಾಗೂ ಇಂತಹ ನಿರ್ಧಾರಗಳು ನಿರಂಕುಶತೆ ಅಥವಾ ನೀತಿ ನಿರ್ಧಾರದ ಇಚ್ಛೆಗನುಗುಣವಾಗಿ ಬಾಧಿತವಾಗಕೂಡದು ಎಂದೂ ನ್ಯಾಯಪೀಠ ಹೇಳಿತು.
ಹೀಗಿದ್ದೂ, ಅಸ್ಸಾಂ ಅರಣ್ಯ ರಕ್ಷಣಾ ಪಡೆಯಲ್ಲಿನ 104 ಕಾನ್ ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಮಾಡುವಾಗ, ಕೇವಲ ದೈಹಿಕ ಪರೀಕ್ಷೆಯನ್ನು ಮಾತ್ರ ನಡೆಸಲಾಗಿತ್ತೇ ಹೊರತು ಲಿಖಿತ ಪರೀಕ್ಷೆಗಳನ್ನು ನಡೆಸಲಿರಲಿಲ್ಲ ಎಂಬ ಅಸ್ಸಾಂ ಸರಕಾರದ ವಾದವನ್ನು ಮನ್ನಿಸಿದ ನ್ಯಾಯಾಲಯ, ಆಯ್ಕೆ ಪ್ರಕ್ರಿಯೆಯಲ್ಲಿನ ಅಕ್ರಮಗಳನ್ನು ಸರಿಪಡಿಸಬಹುದು ಎಂಬ ಅಸ್ಸಾಂ ಹೈಕೋರ್ಟ್ ತೀರ್ಪನ್ನು ವಜಾಗೊಳಿಸಿ, ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿದ್ದ ಅಸ್ಸಾಂ ಸರಕಾರದ ನಿರ್ಧಾರವನ್ನು ಎತ್ತಿ ಹಿಡಿಯಿತು.







