ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸುವ ಕರ್ನಾಟಕದ ಯೋಜನೆ ವಿರುದ್ಧ ಸುಪ್ರೀಂ ಮೆಟ್ಟಲೇರಲು ಮಹಾರಾಷ್ಟ್ರ ನಿರ್ಧಾರ

ಸುಪ್ರೀಂ | PC : PTI
ಮುಂಬೈ: ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸುವ ಕರ್ನಾಟಕದ ಪ್ರಸ್ತಾವದ ವಿರುದ್ಧ ಮಧ್ಯಪ್ರವೇಶ ಅರ್ಜಿಯನ್ನು ಮಹಾರಾಷ್ಟ್ರ ಸರಕಾರ ಸಲ್ಲಿಸಲಿದೆಯೆಂದು ಅಲ್ಲಿನ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಮಂಗಳವಾರ ತಿಳಿಸಿದ್ದಾರೆ.
ಗೋದಾವರಿ ಹಾಗೂ ಕೃಷ್ಣ ಕಣಿವೆ ಅಭಿವೃದ್ಧಿ ನಿಗಮಗಳ ಮೇಲ್ವಿಚಾರಣೆ ವಹಿಸುವ ಜಲಸಂಪನ್ಮೂಲ ಇಲಾಖೆಯ ಸಚಿವರಾದ ವಿಖೆ ಪಾಟೀಲ್ ಅವರು, ಎನ್ಸಿಪಿ (ಶರದ್ ಪವಾರ್) ಸದಸ್ಯ ಅರುಣ್ ಲಾಡ್ ಅವರ ಗಮನಸೆಳೆಯುವ ಪ್ರಶ್ನೆಗೆ ಉತ್ತರಿಸಿದ ಸಂದರ್ಭ ಈ ವಿಷಯ ತಿಳಿಸಿದರು.
ಆಲಮಟ್ಟಿ ಅಟೆಕಟ್ಟಿನ ಎತ್ತರವನ್ನು ಹೆಚ್ಚಿಸುವ ಕರ್ನಾಟಕದ ಯೋಜನೆಗೆ ಮಹಾರಾಷ್ಟ್ರ ಸರಕಾರವು ಆಕ್ಷೇಪ ವ್ಯಕ್ತಪಡಿಸಿದೆಯೇ ಎಂದು ಅರುಣ್ ಲಾಡ್ ಅವರು ಸದನದಲ್ಲಿ ಪ್ರಶ್ನಿಸಿದ್ದರು.
‘‘ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸುವ ಕರ್ನಾಟಕ ಸರಕಾರದ ಯೋಜನೆಯನ್ನು ಮಹಾರಾಷ್ಟ್ರ ಸರಕಾರವು ಸ್ಥಿರವಾಗಿ ವಿರೋಧಿಸುತ್ತಲೇ ಬಂದಿದೆ. ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸುವ ಕರ್ನಾಟಕದ ಯೋಜನೆಗೆ ಅನುಮತಿ ನೀಜುವ ಮುನ್ನ ಮಹಾರಾಷ್ಟ್ರದ ಕಾಳಜಿಯನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ಕೋರಿ ಸರಕಾರವು ಶೀಘ್ರದಲ್ಲೇ ಮಧ್ಯಪ್ರವೇಶ ಅರ್ಜಿಯನ್ನು ಸಲ್ಲಿಸಲಿದೆ ’’ ಎಂದು ಸಚಿವ ವಿಖೆ ಪಾಟೀಲ್ ಅವರು ಉತ್ತರಿಸುತ್ತಾ ತಿಳಿಸಿದರು.
ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸುವ ಕರ್ನಾಟಕದ ಪ್ರಸ್ತಾವಿತ ಯೋಜನೆಯಿಂದ ಉಂಟಾಗುವ ಪರಿಣಾಮಗಳನ್ನು ನಿಷ್ಪಕ್ಷಪಾತವಾಗಿ ಮೌಲ್ಯಮಾಪನ ನಡೆಸಲು ಮಹಾರಾಷ್ಟ್ರ ಸರಕಾರವು ರೂರ್ಕಿಯಲ್ಲಿರುವ ರಾಷ್ಟ್ರೀಯ ಜಲಸಾಸ್ತ್ರ ಸಂಸ್ಥೆಯಿಂದ ವರದಿಯನ್ನು ಕೋರಿದೆ ಎಂದು ವಿಖೆ ತಿಳಿಸಿದರು.
ಆಲಮಟ್ಟಿ ಅಟೆಕಟ್ಟು , ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವೆ ವಿವಾದಾತ್ಮಕ ವಿಷಯವಾಗಿ ಪರಿಣಮಿಸಿದೆ. ನೆರೆಹೊರೆಯ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದ ವಿರೋಧದ ನಡುವೆಯೂ ಕೃಷ್ಣಾ ಜಲ ವ್ಯಾಜ್ಯಗಳ ನ್ಯಾಯಾಧೀಕರಣವು 2008ರ ಆಲಮಟ್ಟಿನ ಅಣೆಕಟ್ಟಿನ ಎತ್ತರವನ್ನು 524.26 ಮೀಟರ್ಗಳಿಗೆ ಹೆಚ್ಚಿಸಲು ಕರ್ನಾಟಕಕ್ಕೆ ಅನುಮತಿ ನೀಡಿತ್ತು.







