ತಪ್ಪಾಗಿ ಉಳಿಸಿಕೊಂಡ ಹಣಕ್ಕೆ ಸರಕಾರವೂ ಬಡ್ಡಿ ಪಾವತಿಸಬೇಕು: ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಕಾನೂನುಬದ್ಧ ಅಧಿಕಾರವಿಲ್ಲದೆ ಸ್ವೀಕರಿಸಿದ ಮತ್ತು ಉಳಿಸಿಕೊಂಡ ಹಣಕ್ಕೆ ಸರಕಾರವು ಸಹ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ ಎಂದು ತನ್ನ ಇತ್ತೀಚಿನ ತೀರ್ಪಿನಲ್ಲಿ ಹೇಳಿರುವ ಸರ್ವೋಚ್ಚ ನ್ಯಾಯಾಲಯವು,ಯಾವುದೇ ಹಣವನ್ನು ಅನಗತ್ಯವಾಗಿ ಉಳಿಸಿಕೊಳ್ಳುವುದು ಸರಕಾರ ಮತ್ತು ಅದರ ಇಲಾಖೆಗಳು ಹಣದ ಮಾಲಿಕನಿಗೆ ಸೂಕ್ತ ಪರಿಹಾರ ನೀಡುವುದನ್ನು ಅಗತ್ಯವಾಗಿಸುತ್ತದೆ ಎಂದು ಒತ್ತಿ ಹೇಳಿದೆ.
ಅಧಿಕಾರವಿಲ್ಲದೆ ಸ್ವೀಕರಿಸಿದ ಮತ್ತು ಉಳಿಸಿಕೊಂಡ ಹಣವು ಬಡ್ಡಿಯನ್ನು ಗಳಿಸುವ ಹಕ್ಕನ್ನು ಹೊಂದಿರುತ್ತದೆ. ಸರಕಾರದ ಕಂದಾಯ ಇಲಾಖೆಯು ಸಂಗ್ರಹಿಸಿದ ಹೆಚ್ಚುವರಿ ಹಣ/ತೆರಿಗೆಯ ಮರುಪಾವತಿಯ ಮೇಲೆ ಬಡ್ಡಿಯನ್ನು ಪಾವತಿಸಲು ಯಾವುದೇ ಸ್ಪಷ್ಟ ಶಾಸನಬದ್ಧ ನಿಬಂಧನೆ ಇಲ್ಲ ಎಂಬ ಕಾರಣಕ್ಕೆ ಇಂತಹ ಹಣವನ್ನು ಅನಗತ್ಯವಾಗಿ ಉಳಿಸಿಕೊಂಡ ಅವಧಿಗೆ ಸಂಚಿತ ಬಡ್ಡಿಯೊಂದಿಗೆ ಮರುಪಾವತಿಸುವ ಸ್ಪಷ್ಟ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಆರ್.ಮಹಾದೇವನ್ ಅವರ ಪೀಠವು ತನ್ನ ಫೆ.18ರ ತೀರ್ಪಿನಲ್ಲಿ ಹೇಳಿದೆ. ತೀರ್ಪನ್ನು ಈ ತಿಂಗಳು ಸುಪ್ರೀಂ ಕೋರ್ಟ್ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
ಸರ್ವೋಚ್ಚ ನ್ಯಾಯಾಲಯವು 2016ರಲ್ಲಿ ಮನೆ ಖರೀದಿಸಲು ಉದ್ದೇಶಿಸಿದ್ದ ಇ-ಸ್ಟ್ಯಾಂಪ್ ಪೇಪರ್ನ್ನು ಕಳೆದುಕೊಂಡಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಹಾಗೂ ನ್ಯಾಯವಾದಿ ಪೂರ್ಣಿಮಾ ಆಡ್ವಾಣಿ ಮತ್ತು ಅವರ ಪತಿ ಶೈಲೇಶ ಹಾಥಿ ಅವರಿಗೆ 28.1 ಲಕ್ಷ ರೂ.ಗಳ ಮರುಪಾವತಿಯ ಮೇಲೆ ಬಡ್ಡಿಯನ್ನು ಪಾವತಿಸುವಂತೆ ದಿಲ್ಲಿ ಸರಕಾರಕ್ಕೆ ತೀರ್ಪಿನಲ್ಲಿ ಆದೇಶಿಸಿದೆ.
ಆಡ್ವಾಣಿ ಎಪ್ರಿಲ್ 2023ರಲ್ಲಿ ನಿಧನರಾಗಿದ್ದು,ಅವರ ಪತಿ ಕಾನೂನು ಸಮರವನ್ನು ಮುಂದುವರಿಸಿದ್ದರು.
ಸರಕಾರವು ವ್ಯಕ್ತಿಗಳ ಹಣವನ್ನು ಅನಗತ್ಯವಾಗಿ ಉಳಿಸಿಕೊಂಡಾಗ ಅವರಿಗೆ ಪರಿಹಾರವನ್ನು ನೀಡಬೇಕು ಎಂಬ ತತ್ವಕ್ಕೆ ಈ ತೀರ್ಪು ಪುಷ್ಟಿಯನ್ನು ನೀಡಿದ್ದು,ತೆರಿಗೆ ಅಧಿಕಾರಿಗಳು ಸೇರಿದಂತೆ ಸರಕಾರಿ ಸಂಸ್ಥೆಗಳು ವಿಳಂಬವಾಗಿ ಹಣವನ್ನು ಮರುಪಾವತಿಸುವ ಪ್ರಕರಣಗಳ ಮೇಲೆ ವ್ಯಾಪಕ ಪರಿಣಾಮಗಳನ್ನು ಬೀರಬಹುದು ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.
ಜುಲೈ 2016ರಲ್ಲಿ ಆಡ್ವಾಣಿ ಮತ್ತು ಹಾಥಿ ದಿಲ್ಲಿಯಲ್ಲಿ ಆಸ್ತಿ ವಹಿವಾಟಿಗಾಗಿ 28.1 ಲಕ್ಷ ರೂ.ಮೌಲ್ಯದ ಇ-ಸ್ಟ್ಯಾಂಪ್ ಪೇಪರ್ನ್ನು ಖರೀದಿಸಿದ್ದರು. ಆದರೆ ಸಾಲ ಮಂಜೂರಾತಿ ಅಂತಿಮಗೊಳ್ಳುವಲ್ಲಿ ವಿಳಂಬದಿಂದಾಗಿ ಮಾರಾಟ ಪತ್ರವನ್ನು ಸಿದ್ಧಗೊಳಿಸುವುದನ್ನು ಮುಂದೂಡಲಾಗಿತ್ತು. ಆಗಸ್ಟ್ 2016ರಲ್ಲಿ ಅವರ ಬ್ರೋಕರ್ ಸ್ಟ್ಯಾಂಪ್ ಪೇಪರ್ ಕಳೆದುಹೋಗಿದೆ ಎಂದು ಅವರಿಗೆ ತಿಳಿಸಿದ್ದ.
ಸ್ಟ್ಯಾಂಪ್ ಪೇಪರ್ ಕಳೆದಿರುವ ಬಗ್ಗೆ ದಂಪತಿ ಪೋಲಿಸ್ ದೂರನ್ನು ಸಲ್ಲಿಸಿದ್ದರು ಮತ್ತು ವೃತ್ತಪತ್ರಿಕೆಗಳಲ್ಲಿ ನೋಟಿಸ್ಗಳನ್ನು ಪ್ರಕಟಿಸಿದ್ದರು. ಗತ್ಯಂತರವಿಲ್ಲದೆ ಅವರು ಹೊಸ ಸ್ಟ್ಯಾಂಪ್ ಪೇಪರ್ ಖರೀದಿಸಿ ಆಸ್ತಿ ವಹಿವಾಟನ್ನು ಪೂರ್ಣಗೊಳಿಸಿದ್ದರು. ಕಳೆದು ಹೋಗಿರುವ ಸ್ಟ್ಯಾಪ್ ಪೇಪರನ ಹಣವನ್ನು ಮರುಪಾವತಿಸುವಂತೆ ಅವರು ದಿಲ್ಲಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರಾದರೂ ಅದು ತಿರಸ್ಕೃತಗೊಂಡಿತ್ತು.ಹೀಗಾಗಿ ಅವರು ದಿಲ್ಲಿ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು.
ಉಚ್ಚ ನ್ಯಾಯಾಲಯವು ಹಣವನ್ನು ಮರುಪಾವತಿಸುವಂತೆ 2018ರಲ್ಲಿ ಸರಕಾರಕ್ಕೆ ಆದೇಶಿಸಿತ್ತಾದರೂ ಅದರ ಮೇಲೆ ಯಾವುದೇ ಬಡ್ಡಿಯನ್ನು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠದ ಮುಂದೆ ಸಲ್ಲಿಸಿದ್ದ ಮೇಲ್ಮನವಿ ವಜಾಗೊಂಡಿತ್ತು. ಇದನ್ನು ಪ್ರಶ್ನಿಸಿ ಅವರು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು.
ಮರುಪಾವತಿಯಲ್ಲಿ ಸುದೀರ್ಘ ವಿಳಂಬವನ್ನು ಗಮನಿಸಿದ ಸರ್ವೋಚ್ಚ ನ್ಯಾಯಾಲಯವು 28.1 ಲಕ್ಷ ರೂ.ಗಳ ಅಸಲು ಹಣದ ಮೇಲೆ 4.35 ಲಕ್ಷ ರೂ.ಗಳ ಬಡ್ಡಿಯನ್ನು ಎರಡು ತಿಂಗಳುಗಳಲ್ಲಿ ಪಾವತಿಸುವಂತೆ ದಿಲ್ಲಿ ಸರಕಾರಕ್ಕೆ ಆದೇಶಿಸಿದೆ.