ನಾಶಿಕ್ ದರ್ಗಾ ಧ್ವಂಸ ಮಾಡಲು ನೀಡಿದ್ದ ನೋಟಿಸ್ ಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ
ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳದ ಬಾಂಬೆ ಹೈಕೋರ್ಟ್ ನಿಂದ ವರದಿ ಕೋರಿಕೆ ► ಸುಪ್ರೀಂ ಕೋರ್ಟ್ ವಿಚಾರಣೆಗೆ ಎತ್ತಿಕೊಳ್ಳುವ ಗಂಟೆಗಳ ಮೊದಲೇ ದರ್ಗಾ ಕೆಡವಿದ ಪುರಸಭೆ!

PC : PTI
ಹೊಸದಿಲ್ಲಿ: ನಾಶಿಕ್ ನಲ್ಲಿರುವ ಹಝ್ರತ್ ಸಾತ್ ಪೀರ್ ಸೈಯದ್ ಬಾಬಾ ದರ್ಗಾವನ್ನು ಕೆಡಹುವುದಕ್ಕೆ ಸಂಬಂಧಿಸಿ ಪುರಸಭೆ ನೀಡಿರುವ ನೋಟಿಸ್ ಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ವಿಷಯದಲ್ಲಿ ದರ್ಗಾ ಸಲ್ಲಿಸಿದ ಅರ್ಜಿಯನ್ನು ಯಾಕೆ ವಿಚಾರಣೆಗೆ ಎತ್ತಿಕೊಂಡಿಲ್ಲ ಎನ್ನುವುದಕ್ಕೆ ಕಾರಣಗಳನ್ನು ನೀಡುವಂತೆ ಬಾಂಬೆ ಹೈಕೋರ್ಟ್ಗೆ ಸೂಚನೆ ನೀಡಿದೆ.
ಆದರೆ, ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಎತ್ತಿಕೊಳ್ಳುವ ಗಂಟೆಗಳ ಮೊದಲೇ ಪುರಸಭೆಯು ದರ್ಗಾವನ್ನು ಕೆಡವಿದೆ ಎಂದು ವರದಿಗಳು ತಿಳಿಸಿವೆ.
ನಾಶಿಕ್ ನ ಕಾತೆ ಗಲ್ಲಿಯಲ್ಲಿರುವ ದರ್ಗಾ ಕಟ್ಟಡದ ಧ್ವಂಸ ಕಾರ್ಯಾಚರಣೆಯನ್ನು ಪುರಸಭೆಯು ಎಪ್ರಿಲ್ 15ರ ರಾತ್ರಿ ನಡೆಸಿದೆ ಎನ್ನಲಾಗಿದೆ. ಧ್ವಂಸವನ್ನು ಪ್ರಶ್ನಿಸಿ ದರ್ಗಾ ಆಡಳಿತ ಮಂಡಳಿಯು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಎಪ್ರಿಲ್ 16 ಮಧ್ಯಾಹ್ನ ನಡೆಸಿತು.
ಹೈಕೋರ್ಟ್ನಲ್ಲಿ ಎಪ್ರಿಲ್ 7ರಂದು ಅರ್ಜಿಯನ್ನು ಸಲ್ಲಿಸಲಾಗಿತ್ತು, ಆದರೆ ಅದನ್ನು ವಿಚಾರಣೆಗೆ ಎತ್ತಿಕೊಳ್ಳಲಾಗಿಲ್ಲ ಎನ್ನುವುದನ್ನು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೋಯ್ಮಾಲಾ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠವೊಂದು ಗಮನಿಸಿತು.
‘‘ಈ ನಡುವೆ, ನಾಶಿಕ್ ಪುರಸಭೆಯು ಎಪ್ರಿಲ್ 1ರಂದು ನೀಡಿರುವ ಧ್ವಂಸ ನೋಟಿಸ್ಗೆ ತಡೆ ವಿಧಿಸಲಾಗಿದೆ’’ ಎಂದು ನ್ಯಾಯಾಲಯ ಆದೇಶ ನೀಡಿತು ಮತ್ತು ವಿಚಾರಣೆಯನ್ನು ಎಪ್ರಿಲ್ 21ಕ್ಕೆ ಮುಂದೂಡಿತು.
ಹಲವು ಪ್ರಯತ್ನಗಳ ಹೊರತಾಗಿಯೂ, ದರ್ಗಾ ಕೆಡಹುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಿಚಾರಣೆಗೆ ಎತ್ತಿಕೊಳ್ಳಲಿಲ್ಲ ಎಂದು ದರ್ಗಾ ಆಡಳಿತ ಮಂಡಳಿಯನ್ನು ಪ್ರತಿನಿಧಿಸಿದ ಹಿರಿಯ ವಕೀಲ ನವೀನ್ ಪಹ್ವ ಹೇಳಿದಾಗ, ಸುಪ್ರೀಂ ಕೋರ್ಟ್ ಈ ಆದೇಶ ನೀಡಿತು.
‘‘ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳುವಂತೆ ನಾವು ಪ್ರತಿದಿನ ಮನವಿ ಮಾಡಿದರೂ ಬಾಂಬೆ ಹೈಕೋರ್ಟ್ ವಿಚಾರಣೆಗೆ ಎತ್ತಿಕೊಳ್ಳಲಿಲ್ಲ ಎಂಬ ಹಿರಿಯ ವಕೀಲರ ಹೇಳಿಕೆಯನ್ನು ಪರಿಗಣಿಸಿ ನಾವು ಈ ಅಸಾಧಾರಣ ಕ್ರಮವನ್ನು ತೆಗೆದುಕೊಂಡಿದ್ದೇವೆ. ಈ ಹೇಳಿಕೆಯ ಬಗ್ಗೆ ಹಾಗೂ ಪದೇ ಪದೇ ಮಾಡಿರುವ ಮನವಿಗಳ ಹೊರತಾಗಿಯೂ ಹೈಕೋರ್ಟ್ ಅರ್ಜಿಯ ವಿಚಾರಣೆಯನ್ನು ಎತ್ತಿಕೊಂಡಿಲ್ಲ ಎಂಬ ಬಗ್ಗೆ ನಮಗೆ ಖಚಿತತೆ ಇಲ್ಲ. ಇದೊಂದು ಗಂಭೀರ ಹೇಳಿಕೆ. ಇಂಥ ಹೇಳಿಕೆಯ ಪರಿಣಾಮಗಳ ಜವಾಬ್ದಾರಿಯನ್ನು ವಕೀಲರು ವಹಿಸಬೇಕು’’ ಎಂದು ಎಪ್ರಿಲ್ 16ರ ಆದೇಶದಲ್ಲಿ ನ್ಯಾಯಪೀಠ ಹೇಳಿತು.
ಬಳಿಕ, ಅರ್ಜಿಯ ದಾಖಲಾತಿಯ ಬಗ್ಗೆ ವರದಿಯೊಂದನ್ನು ಕಳುಹಿಸುವಂತೆ ಬಾಂಬೆ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತು.







