ಜಾಮೀನಿಗೆ ಮುನ್ನ ಒಂದು ವರ್ಷ ಜೈಲಿನಲ್ಲಿರಬೇಕು ಎಂಬ ನಿಯಮವಿಲ್ಲ: ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ: 2,000 ಕೋ.ರೂ.ಗಳ ಮದ್ಯ ಹಗರಣ ಪ್ರಕರಣದಲ್ಲಿ ಉದ್ಯಮಿ ಅನ್ವರ್ ಧೇಬರ್ಗೆ ಜಾಮೀನು ಮಂಜೂರು ಮಾಡಿರುವ ಸರ್ವೋಚ್ಚ ನ್ಯಾಯಾಲಯವು,ಅಕ್ರಮ ಹಣ ವರ್ಗಾವಣೆಯ ಆರೋಪಿಯಾಗಿರುವ ವ್ಯಕ್ತಿ ಜಾಮೀನು ಪಡೆಯುವ ಮುನ್ನ ಒಂದು ವರ್ಷ ಜೈಲಿನಲ್ಲಿರಬೇಕು ಎಂಬ ನಿಯಮವಿಲ್ಲ ಎಂದು ಸ್ಪಷ್ಟಪಡಿಸಿದೆ.
ಧೇಬರ್ ಅವರನ್ನು ಕಳೆದ ವರ್ಷದ ಆಗಸ್ಟ್ನಲ್ಲಿ ಬಂಧಿಸಲಾಗಿದ್ದು, ಒಂಭತ್ತು ತಿಂಗಳಿಗೂ ಹೆಚ್ಚಿನ ಸಮಯವನ್ನು ಜೈಲಿನಲ್ಲಿ ಕಳೆದಿದ್ದಾರೆ.
ಅನ್ವರ್ ವಿರುದ್ಧ ಹೊರಿಸಲಾಗಿರುವ ಆರೋಪಕ್ಕೆ ಗರಿಷ್ಠ ಶಿಕ್ಷೆಯು ಏಳು ವರ್ಷಗಳಾಗಿವೆ. ಸಾಕ್ಷಿಗಳ ಹೆಚ್ಚಿನ ಸಂಖ್ಯೆಯನ್ನು ಗಮನಿಸಿದರೆ ಅವರ ವಿರುದ್ಧ ವಿಚಾರಣೆ ಶೀಘ್ರವೇ ಆರಂಭಗೊಳ್ಳುವ ಸಾಧ್ಯತೆಯಿಲ್ಲ. ಹೀಗಾಗಿ ಕಠಿಣ ಷರತ್ತುಗಳ ಮೇಲೆ ಜಾಮೀನು ಪಡೆಯಲು ಅವರು ಅರ್ಹರಾಗಿದ್ದಾರೆ. ಅವರು ಪಾಸ್ಪೋರ್ಟ್ ಹೊಂದಿದ್ದರೆ ಅದನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ನ್ಯಾಯಮೂರ್ತಿಗಳಾದ ಎ.ಎಸ್.ಓಕಾ ಮತ್ತು ಉಜ್ಜಲ ಭುಯಾನ್ ಅವರ ಪೀಠವು ಸೆಂಥಿಲ್ ಬಾಲಾಜಿ ಪ್ರಕರಣದ ತೀರ್ಪನ್ನು ಉಲ್ಲೇಖಿಸಿ ಹೇಳಿತು.
ಜಾಮೀನಿಗೆ ವಿರೋಧ ವ್ಯಕ್ತಪಡಿಸಿದ ಈಡಿ ಪರ ವಕೀಲರು, ಆರೋಪಿ ಒಂದು ವರ್ಷವನ್ನೂ ಜೈಲಿನಲ್ಲಿ ಕಳೆದಿಲ್ಲ. ಸರ್ವೋಚ್ಚ ನ್ಯಾಯಾಲಯವು ವಿವಿಧ ಪ್ರಕರಣಗಳಲ್ಲಿ ಜಾಮೀನು ಮಂಜೂರು ಮಾಡಲು ‘ಒಂದು ವರ್ಷ ಜೈಲುವಾಸ’ದ ಮಾನದಂಡವನ್ನು ಅನುಸರಿಸುತ್ತಿದೆ ಮತ್ತು ಧೇಬರ್ ಪ್ರಕರಣದಲ್ಲಿಯೂ ಅದನ್ನು ಪಾಲಿಸಬೇಕು ಎಂದು ವಾದಿಸಿದರು.
ಆರೋಪಿ ರಾಜಕೀಯ ಸಂಪರ್ಕವನ್ನು ಹೊಂದಿರುವ ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಜಾಮೀನು ನೀಡಿದರೆ ಅದು ವಿಚಾರಣೆಗೆ ಅಡ್ಡಿಯನ್ನುಂಟು ಮಾಡಬಹುದು ಎಂದು ಅವರು ಆತಂಕವನ್ನು ವ್ಯಕ್ತಪಡಿಸಿದರು.
ಆದರೆ ಅವರ ವಾದಕ್ಕೆ ಸೊಪ್ಪು ಹಾಕದ ಪೀಠವು ವಿಶೇಷ ನ್ಯಾಯಾಲಯವು ನಿಗದಿಗೊಳಿಸುವ ಷರತ್ತುಗಳ ಮೇಲೆ ಆರೋಪಿಯನ್ನು ಒಂದು ವಾರದೊಳಗೆ ಬಿಡುಗಡೆಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿತು.
ಧೇಬರ್ ಕಾಂಗ್ರೆಸ್ ನಾಯಕ ಹಾಗೂ ರಾಯಪುರ ಮೇಯರ್ ಎಜಾಝ್ ಧೇಬರ್ ಅವರ ಸೋದರನಾಗಿದ್ದಾರೆ. ಅವರು ಛತ್ತೀಸ್ಗಡ ಮತ್ತು ಇತರ ಕೆಲವು ರಾಜ್ಯಗಳಲ್ಲಿ ಮದ್ಯ ಮಾರಾಟದಲ್ಲಿ ತೆರಿಗೆ ವಂಚನೆ ಮತ್ತು ಅಕ್ರಮಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು ಸಲ್ಲಿಸಿರುವ ದೋಷಾರೋಪ ಪಟ್ಟಿಯಿಂದ ಉದ್ಭವಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮೊದಲು ಬಂಧಿಸಲ್ಪಟ್ಟ ಆರೋಪಿಯಾಗಿದ್ದಾರೆ.







