ವಕ್ಫ್ ಇಸ್ಲಾಂನ ಮೂಲಭೂತ ಅಂಶವಲ್ಲ: ಸುಪ್ರೀಂ ಕೋರ್ಟ್ಗೆ ತಿಳಿಸಿದ ಕೇಂದ್ರ ಸರಕಾರ
ವಕ್ಫ್ ತಿದ್ದುಪಡಿ ಕಾಯಿದೆ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ

ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ: ವಕ್ಫ್ ದಾನಧರ್ಮವಲ್ಲದೆ ಬೇರೇನೂ ಅಲ್ಲ, ಅದು ಇಸ್ಲಾಂನ ಮೂಲಭೂತ ಅಂಶವಲ್ಲ ಎಂದು ವಕ್ಫ್ ತಿದ್ದುಪಡಿ ಕಾಯಿದೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ಕೇಂದ್ರ ಸರಕಾರದ ಪರ ವಕೀಲರು ಸುಪ್ರೀಂ ಕೋರ್ಟ್ಗೆ ತಿಳಿಸಿದರು.
ಕೇಂದ್ರ ಸರಕಾರದ ಪರ ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ವಕ್ಫ್ ಸ್ವಭಾವತಃ "ಜಾತ್ಯತೀತ ಪರಿಕಲ್ಪನೆ" ಎಂದು ಹೇಳಿದರು.
ಬಳಕೆದಾರರಿಂದ ವಕ್ಫ್ʼ ತತ್ವದಡಿಯಲ್ಲಿ ವಕ್ಫ್ ಎಂದು ಘೋಷಿಸಲಾದ ಆಸ್ತಿಗಳನ್ನು ಮರಳಿ ಪಡೆಯಲು ಕಾನೂನುಬದ್ಧವಾಗಿ ಅಧಿಕಾರವಿದೆ ಎಂದು ಕೇಂದ್ರ ಸರಕಾರ ಬುಧವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ವಕ್ಫ್ ತಿದ್ದುಪಡಿ ಕಾಯಿದೆಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸರಕಾರಿ ಭೂಮಿಯ ಮೇಲೆ ಯಾರೂ ಹಕ್ಕು ಸಾಧಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.
ಸರಕಾರಿ ಭೂಮಿಯ ಮೇಲೆ ಯಾರಿಗೂ ಹಕ್ಕಿಲ್ಲ, ಸರಕಾರಕ್ಕೆ ಸೇರಿದ್ದರೆ ಮತ್ತು ಅದನ್ನು ವಕ್ಫ್ ಎಂದು ಘೋಷಿಸಿದ್ದರೆ ಸರಕಾರವು ಅಂತಹ ಆಸ್ತಿಯನ್ನು ಉಳಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ಹೇಳುತ್ತದೆ ಎಂದು ಮೆಹ್ತಾ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠಕ್ಕೆ ತಿಳಿಸಿದರು.







