ಮಹಿಳೆಯರ ಸುರಕ್ಷತೆಗೆ ರಕ್ಷಣಾಧಿಕಾರಿಗಳನ್ನು ನೇಮಕ ಮಾಡಿ: ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ

ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ: ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯ್ದೆಯ ಜಾರಿಯನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿರುವ ಸುಪ್ರೀಂ ಕೋರ್ಟ್, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳನ್ನು ರಕ್ಷಣಾಧಿಕಾರಿಗಳನ್ನಾಗಿ ನಿಯೋಜಿಸುವಂತೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ.
ನ್ಯಾ. ಬಿ.ವಿ.ನಾಗರತ್ನ ಹಾಗೂ ನ್ಯಾ. ಸತೀಶ್ ಚಂದ್ರ ಶರ್ಮ ಅವರನ್ನೊಳಗೊಂಡ ನ್ಯಾಯಪೀಠ ಈ ನಿರ್ದೇಶನ ನೀಡಿದೆ. ಈ ಅಧಿಕಾರಿಗಳ ಸಕಾಲಿಕ ನೇಮಕಾತಿಯನ್ನು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಮಹಿಳಾ ಮತ್ತು ಮಕ್ಕಳು ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಕಾರ್ಯದರ್ಶಿಗಳು ಖಾತರಿ ಪಡಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯ್ದೆಯ ಕುರಿತು ಜನ ಜಾಗೃತಿ ಮೂಡಿಸಲು ಹಾಗೂ ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಮಾಡುವ ಮೂಲಕ, ಹೀಗೆ ನೇಮಕಗೊಂಡ ರಕ್ಷಣಾಧಿಕಾರಿಗಳು ಸದರಿ ಕಾಯ್ದೆಯ ಸೆಕ್ಷನ್ 11ರಡಿ ತಮ್ಮ ಕರ್ತವ್ಯಗಳನ್ನು ಕ್ರಿಯಾಶೀಲವಾಗಿ ನಿರ್ವಹಿಸಬೇಕು ಎಂದೂ ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ಇದುವರೆಗೂ ರಕ್ಷಣಾಧಿಕಾರಿಗಳು ನಿಯೋಜನೆಗೊಳ್ಳದ ಸ್ಥಳಗಳಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನ್ಯಾಯಾಲಯ ಅರು ವಾರಗಳ ಗಡುವನ್ನು ವಿಧಿಸಿದೆ.
ಇದಲ್ಲದೆ, ಕೌಟುಂಬಿಕ ದೌರ್ಜನ್ಯ ಎದುರಿಸುತ್ತಿರುವ ಮಹಿಳೆಯರು ಸೇವಾ ಪೂರೈಕೆದಾರರು, ನೆರವು ಗುಂಪುಗಳು ಹಾಗೂ ಆಶ್ರಯ ತಾಣಗಳೊಂದಿಗೆ ಸಂಪರ್ಕ ಸಾಧಿಸುವುದನ್ನು ಖಾತರಿ ಪಡಿಸಬೇಕಾದ ಮಹತ್ವವನ್ನು ನ್ಯಾಯಾಲಯ ಒತ್ತಿ ಹೇಳಿದೆ. ಸಮಸ್ಯೆಗೆ ಸಿಲುಕಿರುವ ಮಹಿಳೆಯರಿಗೆ ನೆರವು ಒದಗಿಸಲು ಸೂಕ್ತ ಆಶ್ರಯ ಸೌಕರ್ಯಗಳನ್ನು ಗುರುತಿಸುವಂತೆಯೂ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯ್ದೆಯಡಿ ಸದ್ಯ ಸೃಷ್ಟಿಯಾಗಿರುವ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಅನುಷ್ಠಾನ ತಾಂತ್ರಿಕತೆಯಲ್ಲಿನ ಲೋಪಗಳ ಮೇಲೆ ಬೆಳಕು ಚೆಲ್ಲಿ, 'We the Women of India' ಎಂಬ ಸರಕಾರೇತರ ಸಂಸ್ಥೆ ಸಲ್ಲಿಸಿದ್ದ ಅರ್ಜಿಗೆ ಪ್ರತಿಯಾಗಿ ನ್ಯಾಯಾಲಯದಿಂದ ಈ ನಿರ್ದೇಶನ ಹೊರ ಬಿದ್ದಿದೆ.







