ನ್ಯಾ.ವರ್ಮಾ ನಿವಾಸದಲ್ಲಿ ನಗದು ಪತ್ತೆ ವಿವಾದ; ಆಂತರಿಕ ಸಮಿತಿ ವರದಿ ಬಹಿರಂಗಕ್ಕೆ ಸುಪ್ರೀಂ ಕೋರ್ಟ್ ನಕಾರ

ಸುಪ್ರೀಂ ಕೋರ್ಟ್ |PTI
ಹೊಸದಿಲ್ಲಿ: ದಿಲ್ಲಿ ಹೈಕೋರ್ಟ್ ನ ಮಾಜಿ ನ್ಯಾಯಾಧೀಶ ನ್ಯಾ.ಯಶವಂತ ವರ್ಮಾ ಅವರ ನಿವಾಸದಲ್ಲಿ ನಗದು ಪತ್ತೆ ಪ್ರಕರಣದ ಪರಿಶೀಲನೆಗಾಗಿ ನ್ಯಾಯಾಲಯದಿಂದ ನೇಮಕಗೊಂಡಿದ್ದ ಆಂತರಿಕ ಸಮಿತಿಯ ವರದಿಯನ್ನು ಆರ್ಟಿಐ ಕಾರ್ಯವಿಧಾನದ ಮೂಲಕ ಬಹಿರಂಗಗೊಳಿಸಲು ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿದೆ.
ಭಾರತದ ಮಾಜಿ ಮುಖ್ಯ ನ್ಯಾಯಾಧೀಶ ಸಂಜೀವ ಖನ್ನಾ ಅವರು ವರದಿಯನ್ನು ಪತ್ರದೊಂದಿಗೆ ರಾಷ್ಟ್ರಪತಿಗಳು ಮತ್ತು ಪ್ರಧಾನ ಮಂತ್ರಿಗಳಿಗೆ ರವಾನಿಸಿದ್ದರು. ಸದ್ರಿ ಪತ್ರದ ಪ್ರತಿಯನ್ನು ಬಿಡುಗಡೆಗೊಳಿಸಲೂ ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿದೆ.
ಈ ವಿವರಗಳನ್ನು ಕೋರಿ ಸರ್ವೋಚ್ಚ ನ್ಯಾಯಾಲಯದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ(ಸಿಪಿಐಒ)ಗೆ ಆರ್ಟಿಐ ಅರ್ಜಿಯನ್ನು ಸಲ್ಲಿಸಲಾಗಿತ್ತು. 2019ರ ಸುಭಾಷ್ಚಂದ್ರ ಅಗರ್ವಾಲ್ ಪ್ರಕರಣದ ತೀರ್ಪಿನ ಹಿನ್ನೆಲೆಯಲ್ಲಿ ಕೋರಿರುವ ಮಾಹಿತಿಯನ್ನು ಒದಗಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಅವರು ಅರ್ಜಿಯನ್ನು ತಿರಸ್ಕರಿಸಿದ್ದಾರೆ.
2019ರ ತೀರ್ಪಿನಲ್ಲಿ ಸವೋಚ್ಚ ನ್ಯಾಯಾಲಯವು ಸಂವಿಧಾನದ ಅಡಿ ಗೋಪ್ಯತೆ ಹಕ್ಕು ಮತ್ತು ಮಾಹಿತಿ ಹಕ್ಕಿನ ನಡುವೆ ಸಮತೋಲನದ ಅಗತ್ಯವನ್ನು ಎತ್ತಿ ತೋರಿಸಿತ್ತು.
ಆರ್ಟಿಐ ಅರ್ಜಿಯನ್ನು ತಿರಸ್ಕರಿಸಿರುವ ಸಿಪಿಐಒ ಕಲಂ 8(1)(ಇ) ಮತ್ತು 11 ಸೇರಿದಂತೆ ಆರ್ಟಿಐ ಕಾಯ್ದೆಯ ನಿಬಂಧನೆಗಳನ್ನೂ ಉಲ್ಲೇಖಿಸಿದ್ದಾರೆ. ಇಂತಹ ಮೂರನೇ ವ್ಯಕ್ತಿಯ ಮಾಹಿತಿಗಳು ಸಾರ್ವಜನಿಕ ಹಿತಾಸಕ್ತಿಯಲ್ಲಿ ಅಗತ್ಯವಾಗಿವೆ ಎಂದು ಸಕ್ಷಮ ಪ್ರಾಧಿಕಾರಕ್ಕೆ ಮನವರಿಕೆಯಾಗಿದ್ದರೆ ಮಾತ್ರ ಅವುಗಳನ್ನು ಬಹಿರಂಗಗೊಳಿಸಬಹುದು ಎಂದು ಇವೆರಡೂ ನಿಬಂಧನೆಗಳು ಹೇಳುತ್ತವೆ.
ಮಾ.14ರಂದು ದಿಲ್ಲಿಯ ಲ್ಯುಟೆನ್ಸ್ ನಲ್ಲಿಯ ನ್ಯಾ.ವರ್ಮಾ ಅವರ ನಿವಾಸದಲ್ಲಿ ಅಗ್ನಿ ಅವಘಡ ಸಂಭವಿಸಿದ್ದಾಗ ಭಾರೀ ಪ್ರಮಾಣದ ನಗದು ಪತ್ತೆಯಾಗಿತ್ತು ಎಂಬ ಆರೋಪಕ್ಕೆ ಈ ಪ್ರಕರಣ ಸಂಬಂಧಿಸಿದೆ.







