ನಿರೀಕ್ಷಣಾ ಜಾಮೀನನ್ನು ಯಾಂತ್ರಿಕವಾಗಿ ಕೊಡುವಂತಿಲ್ಲ: ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ: ಗಂಭೀರ ಅಪರಾಧ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನುಗಳನ್ನು ಯಾಂತ್ರಿಕವಾಗಿ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕೊಲೆ ಪ್ರಕರಣವೊಂದರಲ್ಲಿ ನಾಲ್ವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡುವ ಹೈಕೋರ್ಟೊಂದರ ಆದೇಶವೊಂದನ್ನು ರದ್ದುಪಡಿಸುತ್ತಾ, ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂಜಯ್ ಕರೋಲ್ ಮತ್ತು ಸಂದೀಪ್ ಮೆಹ್ತಾ ಅವರನ್ನು ಒಳಗೊಂಡ ಮೂವರು ನ್ಯಾಯಾಧೀಶರ ಪೀಠವೊಂದು ಈ ತೀರ್ಪು ನೀಡಿದೆ.
‘‘ಐಪಿಸಿ 302 ಮತ್ತು 307 ಪರಿಚ್ಛೇದಗಳ ಅಡಿಯಲ್ಲಿ ದಾಖಲಾಗಿರುವ ಗಂಭೀರ ಅಪರಾಧಗಳ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡಿರುವುದಕ್ಕೆ ಹೈಕೋರ್ಟ್ ಆದೇಶದಲ್ಲಿ ಯಾವುದೇ ಕಾರಣವನ್ನು ನೀಡಲಾಗಿಲ್ಲ’’ ಎಂದು ತನ್ನ ಮೇ ಒಂದರ ಆದೇಶದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ.
‘‘ವಿವಾದಿತ ಆದೇಶವು ಗುಪ್ತವಾಗಿದೆ ಮತ್ತು ಅಲ್ಲಿ ಯಾವುದೇ ನ್ಯಾಯಾಂಗ ವಿಶ್ಲೇಷಣೆಯನ್ನು ಒದಗಿಸಲಾಗಿಲ್ಲ. ಗಂಭೀರ ಅಪರಾಧಗಳನ್ನು ಒಳಗೊಂಡ ಪ್ರಕರಣಗಳಲ್ಲಿ ಇಷ್ಟು ಯಾಂತ್ರಿಕವಾಗಿ ನಿರೀಕ್ಷಣಾ ಜಾಮೀನು ನೀಡಲು ಸಾಧ್ಯವಿಲ್ಲ. ಹಾಗಾಗಿ, ಆ ಆದೇಶವನ್ನು ರದ್ದುಪಡಿಸಲಾಗಿದೆ’’ ಎಂದು ಸರ್ವೋಚ್ಛ ನ್ಯಾಯಲಯ ತಿಳಿಸಿದೆ.
ಅರ್ಜಿದಾರರ ತಂದೆಯ ಮೇಲೆ ಅರ್ಜಿದಾರರ ಸಮ್ಮುಖದಲ್ಲೇ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಹಾಗೂ ಈ ಪ್ರಕರಣದಲ್ಲಿ ಅರ್ಜಿದಾರರೇ ಪೊಲೀಸರಿಗೆ ದೂರು ನೀಡಿದವರಾಗಿದ್ದಾರೆ ಎನ್ನುವುದು ಮೊದಲ ಮಾಹಿತಿ ವರದಿ (ಎಫ್ಐಆರ್) ಮತ್ತು ಅದರೊಂದಿಗೆ ಸಲ್ಲಿಸಲಾಗಿರುವ ಪುರಾವೆಯನ್ನು ಗಮನಿಸಿದಾಗ ತಿಳಿದು ಬರುತ್ತದೆ ಎಂದು ನ್ಯಾಯಾಲಯ ಹೇಳಿತು.
‘‘ಘಟನೆಯು ಕಾಲುದಾರಿಗೆ ತಡೆಯೊಡ್ಡಿರುವುದಕ್ಕೆ ಸಂಬಂಧಿಸಿದ ವಿವಾದದಿಂದ ಉದ್ಭವಿಸಿದೆ ಎಂಬಂತೆ ಕಾಣುತ್ತದೆ. ಆರೋಪಿಗಳು ವೈಯಕ್ತಿಕವಾಗಿ ಏನು ಮಾಡಿದ್ದಾರೆ ಎನ್ನುವುದನ್ನು ಎಫ್ಐಆರ್ನಲ್ಲಿ ತಿಳಿಸಲಾಗಿದೆ. ಮೃತ ವ್ಯಕ್ತಿಯು ಕುಸಿದು ಬಿದ್ದ ಬಳಿಕವೂ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂದು ಎಫ್ಐಆರ್ ಹೇಳುತ್ತದೆ’’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪ್ರಕರಣದ ಆರೋಪಗಳ ಗಂಭೀರತೆ ಮತ್ತು ಸ್ವರೂಪವನ್ನು ಅರ್ಥ ಮಾಡಿಕೊಳ್ಳುವಲ್ಲಿ ಹೈಕೋರ್ಟ್ ಸ್ಪಷ್ಟವಾಗಿ ವಿಫಲವಾಗಿದೆ ಎಂದು ಅದು ಹೇಳಿತು.







