ʼಥಗ್ ಲೈಫ್ʼಗೆ ನಿಷೇಧ: ರಾಜ್ಯ ಸರಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್

ಸುಪ್ರೀಂಕೋರ್ಟ್ | PTI
ಹೊಸದಿಲ್ಲಿ: ಹಿಂಸೆ, ಬೆದರಿಕೆ ಹಾಗೂ ಆಡಳಿತೇತರ ಶಕ್ತಿಗಳು ಸಂವಿಧಾನಬಾಹಿರ ನಿರ್ದೇಶನಗಳ ಮೂಲಕ ಕಮಲಹಾಸನ್ ಅಭಿನಯದ ಥಗ್ ಲೈಫ್ ಚಿತ್ರದ ಪ್ರದರ್ಶನಕ್ಕೆ ರಾಜ್ಯದಲ್ಲಿ ತಥಾಕಥಿತ ನಿಷೇಧವನ್ನು ಕೆಲವು ಸಂಘಟನೆಗಳು ಹೇರಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಶುಕ್ರವಾರ ಕರ್ನಾಟಕ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಬೆಂಗಳೂರಿನ ನಿವಾಸಿ ಎಂ. ಮಹೇಶ್ ರೆಡ್ಡಿ ಎಂಬವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಆಲಿಕೆ ನಡೆಸಿದ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಹಾಗೂ ಮನಮೋಹನ್ ಅವರನ್ನೊಳಗೊಂಡ ನ್ಯಾಯಪೀಠವು ಈ ಬಗ್ಗೆ ಕರ್ನಾಟಕ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿತು.
ಥಗ್ ಲೈಫ್ ಚಿತ್ರಕ್ಕೆ ತಥಾಕಥಿತ ನಿಷೇಧವನ್ನು ಘೋಷಿಸಿದವರ ವಿರುದ್ಧ ಸರಕಾರದ ಅಧಿಕಾರಿಗಳಿಂದ ಯಾವುದೇ ಎಫ್ಐಆರ್ ದಾಖಲಾಗಿಲ್ಲ ಹಾಗೂ ಅಂತಹ ಶಕ್ತಿಗಳ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳಲಾಗಿಲ್ಲ. ಬದಲಿಗೆ ರಾಜ್ಯ ಸರಕಾರವು ತೀವ್ರವಾದಿ ಶಕ್ತಿಗಳ ಜೊತೆ ಕೈಜೋಡಿಸಿದೆ ಎಂದು ಅರ್ಜಿಯಲ್ಲಿ ಆಪಾದಿಸಲಾಗಿದೆ.
ಕೇಂದ್ರೀಯ ಚಲನಚಿತ್ರ ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಪಡೆದಿರುವ ಥಗ್ ಲೈಫ್ ಚಿತ್ರಕ್ಕೆ ರಾಜ್ಯದ ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತಿಲ್ಲ. ಚಿತ್ರಮಂದಿರಗಳಲ್ಲಿ ಗಲಭೆ ಪ್ರಚೋದಿಸುವುದು ಸೇರಿದಂತೆ ಭಯದ ಅಭಿಯಾನವನ್ನೇ ನಡೆಸುವ ಬೆದರಿಕೆಯೊಡ್ಡುವ ಮೂಲಕ ನಿಷೇಧಕ್ಕೆ ಕರೆ ನೀಡಿರುವುದನ್ನು ನ್ಯಾಯಪೀಠ ಗಮನಿಸಿದೆ ಎಂದರು.
ವಿಷಯವನ್ನು ತುರ್ತಾಗಿ ಪರಿಗಣಿಸುವ ಅವಶ್ಯಕತೆಯಿರುವುದರಿಂದ ಸಂಬಂಧಪಟ್ಟ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸುವಂತೆ ನ್ಯಾಯಪೀಠ ಆದೇಳಿಸಿದೆ.
ಕನ್ನಡ ಭಾಷೆಯು ತಮಿಳಿನಿಂದ ಉಗಮಗೊಂಡಿದೆ ಎಂದು ಕಮಲಹಾಸನ್ ನೀಡಿರುವ ಹೇಳಿಕೆಯು ಕರ್ನಾಟಕದಲ್ಲಿ ವ್ಯಾಪಕ ಆಕ್ರೋಶವನ್ನು ಸೃಷ್ಟಿಸಿದೆ. ತನ್ನ ಹೇಳಿಕೆಗಾಗಿ ಕಮಲ್ ಹಾಸನ್ ಕ್ಷಮೆಯಾಚಿಸುವವರೆಗೆ ಅವರ ಅಭಿನಯದ ಥಗ್ ಲೈಫ್ ಚಿತ್ರವನ್ನು ನಿಷೇಧಿಸುವಂತೆ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದವು.







