ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ವಿಳಂಬ: ಉತ್ತರ ಪ್ರದೇಶ ಜೈಲು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್
ಆರೋಪಿಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ಸೂಚನೆ

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಆರೋಪಿಯೊಬ್ಬನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ವಿಳಂಬ ಮಾಡಿದ್ದಕ್ಕಾಗಿ ಬುಧವಾರ ಉತ್ತರ ಪ್ರದೇಶ ಜೈಲು ಅಧಿಕಾರಿಗಳನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು.
ಉತ್ತರ ಪ್ರದೇಶ ಮತಾಂತರ ನಿಷೇಧ ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದ ಆರೋಪಿಯೊಬ್ಬನಿಗೆ ಎಪ್ರಿಲ್ 29ರಂದು ಸುಪ್ರೀಂ ಕೋರ್ಟ್ ಜಾಮೀನು ನೀಡಿದ್ದರೂ, ಆತನನ್ನು ಬಿಡುಗಡೆಗೊಳಿಸಲು ಉತ್ತರ ಪ್ರದೇಶ ಜೈಲು ಅಧಿಕಾರಗಳು ವಿಳಂಬ ಧೋರಣೆ ಅನುಸರಿಸಿದ್ದವು. ಈ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ವಿ.ವಿಶ್ವನಾಥನ್ ಹಾಗೂ ಎನ್.ಕೋಟೀಶ್ವರ್ ಸಿಂಗ್, ಜೂನ್ 24ರಂದು ಗಾಝಿಯಾಬಾದ್ ಜಿಲ್ಲಾ ನ್ಯಾಯಾಲಯದಿಂದ ಬಿಡುಗಡೆಗೊಂಡ ಆರೋಪಿಗೆ ರಾಜ್ಯ ಸರಕಾರ 5 ಲಕ್ಷ ರೂ. ತಾತ್ಕಾಲಿಕ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆದೇಶಿಸಿತು.
“ನಿಮ್ಮ ಅಧಿಕಾರಿಗಳನ್ನು ಸಂವೇದನಾಶೀಲರನ್ನಾಗಿಸಲು ನೀವು ಯಾವ ಕ್ರಮಗಳನ್ನು ಪ್ರಸ್ತಾಪಿಸುತ್ತೀರಿ?” ಎಂದು ವಿಚಾರಣೆಯ ವೇಳೆ ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದೆದುರು ಹಾಜರಾದ ಉತ್ತರ ಪ್ರದೇಶ ಬಂದೀಖಾನೆ ಮಹಾ ನಿರ್ದೇಶಕರನ್ನು ನ್ಯಾಯಪೀಠ ಪ್ರಶ್ನಿಸಿತು.
ಸಂವಿಧಾನದ 21ನೇ ವಿಧಿಯಡಿ ಖಾತರಿಪಡಿಸಲಾಗಿರುವ ಸ್ವಾತಂತ್ರ್ಯದ ಮಹತ್ವದ ಕುರಿತು ಅಧಿಕಾರಿಗಳನ್ನು ಸಂವೇದನಾಶೀಲರನ್ನಾಗಿಸಬೇಕು ಎಂದೂ ನ್ಯಾಯಾಲಯ ಸೂಚಿಸಿತು. “ಸಂವಿಧಾನದಡಿ ಖಾತರಿಪಡಿಸಲಾಗಿರುವ ಸ್ವಾತಂತ್ರ್ಯ ತುಂಬಾ ಮೌಲ್ಯಯುತ ಹಾಗೂ ಅಮೂಲ್ಯ ಹಕ್ಕಾಗಿದೆ” ಎಂದೂ ಸುಪ್ರೀಂ ಕೋರ್ಟ್ ಹೇಳಿತು.
ಆರೋಪಿಯನ್ನು ಮಂಗಳವಾರ ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಹಾಗೂ ಈ ವಿಳಂಬಕ್ಕೆ ಕಾರಣವೇನೆಂದು ಪತ್ತೆ ಹಚ್ಚಲು ತನಿಖೆಗೆ ಚಾಲನೆ ನೀಡಲಾಗಿದೆ ಎಂದು ವಿಚಾರಣೆಯ ವೇಳೆ ಉತ್ತರ ಪ್ರದೇಶ ಸರಕಾರದ ಪರವಾಗಿ ಹಾಜರಿದ್ದ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಅದಕ್ಕೆ ಪ್ರತಿಯಾಗಿ, ಗಾಝಿಯಾಬಾದ್ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಈ ಕುರಿತು ತನಿಖೆ ನಡೆಸಬೇಕು ಹಾಗೂ ತನ್ನೆದುರು ಅವರ ವರದಿಯನ್ನು ಸಲ್ಲಿಸಬೇಕು ಎಂದು ನ್ಯಾಯಪೀಠ ಸೂಚಿಸಿತು.







