ಮತದಾರಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಶ್ನಿಸಿದ ಇನ್ನೊಂದು ಅರ್ಜಿಯ ವಿಚಾರಣೆಗೆ ಸುಪ್ರೀಂ ಸಮ್ಮತಿ

ಸುಪ್ರೀಂಕೋರ್ಟ್
ಹೊಸದಿಲ್ಲಿ: ಚುನಾವಣಾ ಆಯೋಗದ ಮತದಾರಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಅಭಿಯಾವನ್ನು ಪ್ರಶ್ನಿಸಿದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಹಾಗೂ ನ್ಯಾಯಮೂರ್ತಿ ಜಯಮಾಲಿಯಾ ಬಾಘ್ಚಿ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ನ್ಯಾಯಪೀಠ ಬುಧವಾರ ಸಮ್ಮತಿಸಿದೆ. ಈ ಕುರಿತಾಗಿ ವಿಚಾರಣೆಗೆ ಬಾಕಿಯಿರುವ ಇತರ ಅರ್ಜಿಗಳ ಜೊತೆಗೆ ಇದನ್ನು ಕೂಡಾ ಪರಿಶೀಲಿಸಲು ನ್ಯಾಯಾಲಯ ತೀರ್ಮಾನಿಸಿತು.
ಅರ್ಶದ್ ಅಜ್ಮಾಲ್ ಹಾಗೂ ರೂಪೇಶ್ ಕುಮಾರ್ ಅವರು ಸಲ್ಲಿಸಿದ ಈ ಅರ್ಜಿಯ ತುರ್ತು ಆಲಿಕೆ ನಡೆಸುವಂತೆ ನ್ಯಾಯವಾದಿ ವೃಂದಗೋವರ್ ನ್ಯಾಯಪೀಠಕ್ಕೆ ಮನವಿ ಮಾಡಿದ್ದರು.
ಚುನಾವಣಾ ಆಯೋಗದ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಅಭಿಯಾನವು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಯ ತತ್ವಗಳನ್ನು ಕಡೆಗಣಿಸುತ್ತದೆ. ವ್ಯಕ್ತಿಯ ಜನನ, ವಾಸ್ತವ್ಯ ಹಾಗೂ ಪೌರತ್ವಕ್ಕೆ ಸಂಬಂಧಿಸಿದ ವಿಷಯಗಳನ್ನು ಏಕಪಕ್ಷೀಯ, ಅತಾರ್ಕಿಕ ಹಾಗೂ ಅಸಮಾನವಾದ ರೀತಿಯಲ್ಲಿ ದಾಖಲೀಕರಣ ನಡೆಸುವುದು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ತತ್ವಗಳನ್ನು ದುರ್ಬಲಗೊಳಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ.





